ವಿಜಯಪುರ : ಕುಟುಂಬ ರಾಜಕಾರಣದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾ ದ್ವೇಷ ಸಾಧಿಸುತ್ತಲೇ ಬಂದಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಹಿಂದೆ ರಾಯಣ್ಣ ಬ್ರಿಗೆಡ್ ಎಂಬ ಸಂಘಟನೆಯ ಸ್ಥಾಪನೆ ಮಾಡಿದ್ದರು. ಆದರೆ ಅದು ಕೇವಲ ಹೆಸರಿಗೆ ಅಷ್ಟೇ ಸೀಮಿತವಾಯಿತು. ಇದೀಗ ಕೆ.ಎಸ್ ಈಶ್ವರಪ್ಪ ಮತ್ತೊಂದು ಸಂಘಟನೆ ಸ್ಥಾಪಿಸಲು ಮುಂದಾಗಿದ್ದು ‘ರಾಯಣ್ಣ ಚೆನ್ನಮ್ಮ’ ಬ್ರಿಗೇಡ್ ಸಂಘಟನೆ ಸ್ಥಾಪಿಸಲು ಮುನ್ನುಡಿ ಬರೆದಿದ್ದಾರೆ.
ಹೌದು ಈ ವಿಚಾರವಾಗಿ ಇಂದು ವಿಜಯಪುರ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿರುವ ಹುಲಜಂತಿ ಮಠದ ಆವರಣದಲ್ಲಿ ಮಠಾಧೀಶರು,ಬೆಂಬಲಿಗರೊಂದಿಗೆ ಸಭೆ ನಡೆಸಿದರು. ತಮ್ಮ ಎಲ್ಲ ಬೆಂಬಲಿಗರೊಂದಿಗೆ ಸಭೆ ಸೇರಿ ಚರ್ಚಿಸಿ ಅಂತಿಮವಾಗಿ ಹಿಂದುತ್ವದ ಹೆಸರಿನಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸಂಘಟನೆ ಮಾಡುವುದಾಗಿ ಘೋಷಿದ್ದಾರೆ.
ಹಿಂದುಳಿದವರಿಗೆ ಅನ್ಯಾಯವಾಗುವುದನ್ನು ತಡೆಯಲು ಬ್ರಿಗೇಡ್ ಬೇಕು ಎಂದು ಅನೇಕರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕೂಡ ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ ಯತ್ನಾಳ ಸೇರಿ ಆರ್‌ಸಿಬಿ ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಬೆಂಬಲಿಗರೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳ ಪ್ರಮುಖರು ಸೇರಲಿ. ಸುದೀರ್ಘವಾಗಿ ಸಭೆಯಲ್ಲಿ ಚರ್ಚೆ ಮಾಡಿ ಬಳಿಕ ರಾಜ್ಯ ಮಟ್ಟದ ಸಭೆ ನಡೆಸಲು ಮುಂದಿನ ತೀರ್ಮಾನ ತೆಗೆದುಕೊಳ್ಳೋಣ. ಈಶ್ವರಪ್ಪಗೆ ಅನ್ಯಾಯವಾಗಿದೆ. ಅವರಿಗೆ ಸಿಎಂ ಮಾಡಲಿಲ್ಲ ಎಂದು ಯಾರೂ ಹೇಳಬೇಡಿ. ಇಲ್ಲಿ ಬಹಳ ಜನರಿಗೆ ಅನ್ಯಾಯವಾಗಿದೆ. ಹೊಸ ಸಂಘಟನೆಯಿಂದ ಹಿಂದೂತ್ವಕ್ಕೆ ಯಶಸ್ಸು ಸಿಗುತ್ತದೆ ಎಂದರು.
ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲಿಸುವಂತೆ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ದೂರಿನ ಮೇರೆಗೆ ಅಮಿತ್ ಶಾ ಅವರು ನನಗೆ ಸೂಚಿಸಿದ್ದ ಕಾರಣಕ್ಕೆ ಕೈಬಿಟ್ಟಿದ್ದೆ. ಅಂದು ರಾಯಣ್ಣ ಬ್ರಿಗೇಡ್ ಸಂಘಟನೆ ಕೈಬಿಟ್ಟು ತಪ್ಪು ಮಾಡಿದೆ ಎಂದು ಈಗ ಅನಿಸುತ್ತಿದೆ. ಜೀವನದಲ್ಲಿ ಬಿಜೆಪಿ ಬಿಟ್ಟು ಬೇರಾವ ಪಕ್ಷಕ್ಕೂ ಹೋಗುವುದಿಲ್ಲ. ಆದರೆ, ಭ್ರಷ್ಟಾಚಾರಿಗಳಿಂದ, ಅಪ್ಪ-ಮಕ್ಕಳ ಕಪಿಮುಷ್ಠಿಯಿಂದ ಶುದ್ಧೀಕರಣವಾಗದ ಹೊರತು ಬಿಜೆಪಿಗೆ ಸದ್ಯ ಹೋಗಲ್ಲ.