ಕೋಲಾರ : ರಾಜ್ಯದಲ್ಲಿ ಸಿಎಂ ಸ್ಥಾನದ ಬದಲಾವಣೆ ಕೂಗು ಜಾಸಿಯಾಗಿದ್ದು, ಸದ್ಯ ಕಾಂಗ್ರೆಸ್ ನಾಯಕರು ದಿನಕ್ಕೊಂದರಂತೆ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಇದೀಗ ಶಾಸಕ ಕೊತ್ತೂರು ಮಂಜುನಾಥ್ ಕೂಡ ಕೋಲಾರ ಭಾಗದವರಿಗೂ ಸಿಎಂ ಸ್ಥಾನ ಕೊಡಲಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಸ್ಥಾನದ ಕುರಿತು ಭಾರಿ ಪೈಪೋಟಿ ನಡೆಯುತ್ತಿದ್ದು, ಉತ್ತರ ಕರ್ನಾಟಕಕ್ಕೆ, ಬೆಳಗಾವಿ ಭಾಗಕ್ಕೆ ಕೇಳುತ್ತಾರೆ. ಆದರೆ ಕೋಲಾರಕ್ಕೂ ಕೊಡಲಿ ಬಿಡಿ. ಬೆಂಗಳೂರಿಗೂ ಹತ್ತಿರವಾಗಿದೆ. ಕೋಲಾರ ಭಾಗದಿಂದ ಸಿಎಂ ಸ್ಥಾನ ಕೇಳೋದು ತಪ್ಪಿಲ್ಲ. ಕೋಲಾರ ಅಭಿವೃದ್ಧಿಯಾಗಲಿ ಎಂದರು.
ಸಿಎಂ ಬದಲಾವಣೆ ಬಗ್ಗೆ ಯಾರೋ ಹೇಳುವ ಮಾತುಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ, ನಮ್ಮ ಪಕ್ಷದ ಹೈಕಮಾಂಡ್ ಸಿಎಂ ಬದಲಾವಣೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಇದೆಲ್ಲ ವಿರೋಧ ಪಕ್ಷಗಳ ಊಹಾಪೋಹವಾಗಿದ್ದು, ಉತ್ತರಿಸುವ ಅವಶ್ಯಕತೆ ಇಲ್ಲ ಹಾಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಆದ್ದರಿಂದ ಬದಲಾವಣೆಗೆ ಪ್ರಶ್ನೆಯೂ ಇಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದರು .