ಕೊಡಗು : ಇಂದಿನ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಪೋಷಕರಾಗಲಿ ಬೇರೆ ಯಾರೇ ಏನೇ ಅಂದರೂ ಕೂಡ ಸಾಕು ಏನಾದರೂ ಒಂದು ಅನಾಹುತ ಮಾಡಿಕೊಳ್ಳುತ್ತಾರೆ. ಇದೀಗ ಕೊಡಗಿನಲ್ಲೂ ಕೂಡ ಅಂಥದ್ದೇ ಘಟನೆ ನಡೆದಿದ್ದು, ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಅಕ್ಕ ತಮ್ಮ ನಡುವೆ ಮೊಬೈಲ್ ವಿಚಾರವಾಗಿ ಗಲಾಟೆಯಾಗಿದ್ದು, ಮನನೊಂದ ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೌದು ಕೊಡಗು ಜಿಲ್ಲೆಯ ಕುಶಾಲ್ ನಗರದ ಆದಿಶಂಕರಾಚಾರ್ಯ ಬಡಾವಣೆ ನಿವಾಸಿ ರಣಜಿತ್ ಸಿಂಗ್ ಅವರ ಪುತ್ರಿ ಭಾವನ (19) ಮೃತ ದುರ್ದೈವಿ ಎಂದು ತಿಳಿದುಬಂದಿದೆ. 10ನೇ ತರಗತಿ ಮುಗಿಸಿಕೊಂಡ ಭಾವನಾ ಅಪ್ಪನಿಗೆ ಸಹಾಯ ಮಾಡಲು ಫ್ಯಾನ್ಸಿ ಸ್ಟೋರ್ ಅಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಡಿ.8 ರಂದು ಅಂಗಡಿಯಲ್ಲಿದ್ದ ಭಾವನ ಹಾಗೂ ಆಕೆಯ ತಮ್ಮನಾದ ಮಹಿಪಾಲ್ ನಡುವೆ ಜಗಳವಾಗಿದೆ. ಇದರಿಂದ ಬೇಸರಗೊಂಡ ಭಾವನ ಮನೆಗೆ ಹೋಗಿರುವುದಾಗಿ ತಿಳಿಸಿ ಹೊರಟಿದ್ದಾಳೆ.
ಮನೆಗೆ ಹೋಗುತ್ತೇನೆ ಎಂದು ಹೇಳಿದ ಭಾವನ ರಾತ್ರಿಯಾದರೂ ಮನೆಗೆ ಬಾರದೆ ಇದುದ್ದನ್ನು ತಿಳಿದು ತಂದೆ ರಣಜಿತ್ ಸಿಂಗ್ ಎಲ್ಲಾ ಕಡೆ ಹುಡುಕಾಡಿ ಕೊನೆಗೆ ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಗಮನಿಸಿ, ಭಾವನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಡೆ ಹೋಗುತ್ತಿರುವುದು ಕಂಡು ಬಂದಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಶೋಧ ಕಾರ್ಯ ನಡೆಸಿದ ಪೊಲೀಸರು ದಂಡಿನಪೇಟೆ ಭಾಗ ಕಾವೇರಿ ನದಿಯಲ್ಲಿ ಮೃತ ದೇಹ ಪತ್ತೆಯಾಗಿದೆ.ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.