ಬೆಳಗಾವಿ : ಬೆಳಗಾವಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಪುಂಡರು ಹಲ್ಲೆ ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಮಾತನಾಡಿದ ಪ್ರವೀಣ್ ಶೆಟ್ಟಿ, ಬೆಳಗಾವಿ ನಮ್ಮದು. ನಮ್ಮ ಕರ್ನಾಟಕದಲ್ಲಿಯೇ ಮರಾಠಿ ಪುಂಡರು, ಎಂಇಎಸ್ ನವರು ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ತರ್ ಮೇಲೆ ಹಲ್ಲೆ ನಡೆಸಿ, ಮರಾಠಿ ಮಾತನಾಡುವಂತೆ, ಮಹಾರಾಷ್ಟ್ರದ ಪರ ಘೋಷಣೆ ಕೂಗುವ ಹೇಳುತ್ತಿರುವುದು ಉದ್ಧಟತನ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ಕರವೇ ಕಾರ್ಯಕರ್ತರನ್ನು ತಡೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ.