ಕಲಬುರ್ಗಿ : ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ, ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ, ಅವರಿಂದ ಲಕ್ಷ ಲಕ್ಷ ಹಣ ಪಿಕಿ, ನಕಲಿ ನೇಮಕಾತಿ ಆದೇಶ ಪತ್ರ ವಿತರಣೆ ಮಾಡುತ್ತಿದ್ದ ಇಬ್ಬರು ಕತರ್ನಾಕ್ ಖದೀಮರನ್ನು ಕಲ್ಬುರ್ಗಿಯ ಸೆನ್ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಕಲ್ಬುರ್ಗಿಯ ಸೆನ್ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಮಹಾರಾಷ್ಟ್ರದ ಸೋಲಾಪುರದಲ್ಲಿ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ನಾಗೇಶ್ ಸಂಕಲ್ ಮತ್ತು ಅಭಿಷೇಕ್ ಮಾತಾಡಿ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತರು ಕಲ್ಬುರ್ಗಿ ತಾಲೂಕಿನ ಮೇಳಕುಂದ (ಬಿ) ಗ್ರಾಮದ ನಾಗೇಶ್ ಸುಂಕನ್ ಹಾಗು ಅಭಿಷೇಕ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತಾರೀಹಾಳ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಆರೋಪಿಗಳು ಕಂದಾಯ, ರೈಲ್ವೆ ಇಲಾಖೆ, ಆರೋಗ್ಯ ಇಲಾಖೆ, ವಾಣಿಜ್ಯ ತೆರಿಗೆ, ಸಮಾಜ ಕಲ್ಯಾಣ, ಪಂಚಾಯತ್ ರಾಜ್, ಅಬಕಾರಿ ಇಲಾಖೆ, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಎಸಗಿದ್ದರು. ಯುವಕರ ಬಳಿ ಲಕ್ಷ ಹಣ ಪಡೆದು ವಂಚನೆ ಎಸಗುತ್ತಿದ್ದರು. ಡಿ ಗ್ರೂಪ್ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ. ಯುವಕರಿಂದ ಹಣ ಪಡೆದು ನಕಲಿ ನೇಮಕಾತಿ ಆದೇಶ ಪ್ರತಿ ನೀಡುತ್ತಿದ್ದರು.
ಮೊಬೈಲ್ ನಲ್ಲಿ ಅಭಿಷೇಕ್ ಮಾತಾಡಿ, ಆದೇಶ ಪ್ರತಿಯನ್ನು ಸಿದ್ಧಪಡಿಸುತ್ತಿದ್ದ. ನಿರುದ್ಯೋಗಿ ಯುವಕರನ್ನೇ ನಾಗೇಶ ಟಾರ್ಗೆಟ್ ಮಾಡುತ್ತಿದ್ದ. ನಿರುದ್ಯೋಗಿ ಯುವಕರಿಗೆ ಗಾಳ ಹಾಕಿ ನಾಗೇಶ್ ಹಣ ಪಡೆಯುತ್ತಿದ್ದ. ಒಂದು ನೇಮಕಾತಿ ಪ್ರತಿ ಸಿದ್ಧಪಡಿಸಲು 5000 ಪಡೆಯುತ್ತಿದ್ದ ಅಭಿಷೇಕ್. ಕಳೆದ ಆರು ತಿಂಗಳಲ್ಲಿ ಆರೋಪಿಗಳು 9 ಯುವಕರಿಗೆ ವಂಚಿಸಿದ್ದಾರೆ. 14 ಲಕ್ಷಕ್ಕೂ ಅಧಿಕ ಹಣ ಪಡೆದಿರುವ ಆರೋಪ ಇದೀಗ ಕೇಳಿಬಂದಿದೆ. ಪುಣೆ, ಸೊಲ್ಲಾಪುರದಲ್ಲಿ ನಕಲಿ ನೇಮಕಾತಿ ಪತ್ರಗಳನ್ನು ರೆಡಿ ಮಾಡುತ್ತಿದ್ದರು.
ಕಲಬುರ್ಗಿ, ಬೀದರ್, ಯಾದಗಿರಿ ಹಾಗು ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ನಿರುದ್ಯೋಗಿ ಯುವಕರಿಗೆ ಆರೋಪಿಗಳು ಲಕ್ಷಾಂತರ ರೂ ಹಣ ಪಡೆದು ವಂಚಿಸಿದ್ದಾರೆ. ಬಂಧಿತ ಆರೋಪಿಗಳ ಬಳಿ ಇದ್ದ 2 ಮೊಬೈಲ್, 2 ಸಿಮ್ ಕಾರ್ಡ್, 43 ವಿವಿಧ ಹುದ್ದೆಗಳ ನಕಲಿ ನೇಮಕಾತಿ ಆದೇಶ ಪತ್ರಗಳು, 25,000 ನಗದು ಹಣವನ್ನು ಕಲಬುರ್ಗಿ ಸೆನ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.