ಬಳ್ಳಾರಿ : ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಅವರ ತಮ್ಮ 30 ವರ್ಷಗಳ ಗೆಳೆತನದಲ್ಲಿ ಬಿರುಕು ಮೂಡಿದೆ. ಈ ಒಂದು ಬಿರುಕು ಎಷ್ಟರಮಟ್ಟಿಗೆ ಮುಂದೆ ಹೋಗಿದೆ ಅಂದರೆ, ಬಳ್ಳಾರಿಯ ಅವಂಬಾವಿಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮನೆಯ ನಡುವೆ ಇರುವಂತಹ ಗೇಟ್ ಕೂಡ ಇದೀಗ ಶ್ರೀರಾಮುಲು ಅವರು ಕ್ಲೋಸ್ ಮಾಡಿಸಿದ್ದಾರೆ.
ಹೌದು ಬಳ್ಳಾರಿಯ ಅವಂಬಾವಿಯಲ್ಲಿ ಶ್ರೀರಾಮುಲು ಹಾಗೂ ಶಾಸಕ ಜನರದನ್ನ ರೆಡ್ಡಿ ನಡುವೆ ಕೇವಲ 50 ಮೀಟರ್ ಅಂತರವಿದ್ದು ಇವರ ಇಬ್ಬರ ಮನೆಯ ನಡುವೆ ಒಂದು ಗೇಟ್ ಇತ್ತು. ಸದ್ಯ ಇದೀಗ ಅದನ್ನು ಸಿಮೆಂಟ್ ಪ್ಲಾಸ್ಟರ್ ಮೂಲಕ ಶ್ರೀರಾಮುಲು ಅವರು ಗೇಟ್ ಅನ್ನು ಬಂದ್ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಶ್ರೀರಾಮುಲು ಅವರನ್ನ ಪ್ರಶ್ನಿಸಿದಾಗ ವಾಸ್ತು ಪ್ರಕಾರ ಗೇಟ್ ಅನ್ನು ಬಂದ್ ಮಾಡಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ, ಶಾಸಕ ಜನಾರ್ಧನ ರೆಡ್ಡಿ ಅವರ ವಿರುದ್ಧ ಕಿಡಿ ಕಾರಿದ್ದ ಶ್ರೀರಾಮುಲು ಅವರು,ಬಿಜೆಪಿ ಬಿಡುತ್ತೇನೆ ಎಂದು ಈ ಹಿಂದೆ ಹೇಳಿಕೆ ನೀಡಿದರು.ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿನ್ನೆ ಶ್ರೀರಾಮುಲು ಅವರಿಗೆ ಕರೆ ಮಾಡಿ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ.ಪಕ್ಷ ಬಿಡುವ ಹಾಗೂ ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ ಎಂದು ಮನವಿ ಮಾಡಿದ್ದರು.
ಇನ್ನು ಇಂದು ಬಿಜೆಪಿಯ ಹೈಕಮಾಂಡ್ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಸಂಧಾನ ನಡೆಸಲು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದೆ. ಇವರಿಬ್ಬರ ನಡುವೆ ಸಂಧಾನ ಮಾಡಿಸಿ ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಮೊದಲು ಶ್ರೀರಾಮುಲು ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಬಳಿಕ ಜನಾರ್ಧನ ರೆಡ್ಡಿ ಅವರಿಗೆ ಕೂಡ ದೆಹಲಿಗೆ ಬರುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.