ಬೆಂಗಳೂರು : ಬಿಜೆಪಿಯ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ನಡುವಿನ 30 ವರ್ಷಗಳ ಸ್ನೇಹದಲ್ಲಿ ಇದೀಗ ಬಿರುಕು ಉಂಟಾಗಿದ್ದು, ನಿನ್ನೆ ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಗಂಭೀರವಾದ ಆರೋಪ ಮಾಡಿದ್ದರು. ಇದೀಗ ಜನಾರ್ಧನ ರೆಡ್ಡಿ ಸತೀಶ್ ಜಾರಕಿಹೊಳಿಯನ್ನು ಮಣಿಸಲು ಡಿಸಿಎಂ ಡಿಕೆ ಶಿವಕುಮಾರ್ ಶ್ರೀರಾಮುಲು ಜೊತೆಗೆ ಚರ್ಚಿಸಿದ್ದಾರೆ ಎಂದು ಹೊಸ ಬಾಂಬ್ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀರಾಮುಲು ಹಾಗೂ ನನ್ನ ನಡುವೆ ಸುಮಾರು 30 ವರ್ಷಗಳ ಕಾಲ ಸ್ನೇಹವಿದೆ. ಇದೆಲ್ಲವನ್ನು ಮರೆತು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ. ಸತೀಶ್ ಜಾರಕಿಹೊಳಿ ಅವರನ್ನು ಮಡಿಸಲು ಡಿಕೆ ಶಿವಕುಮಾರ್ ಅವರಿಗೆ ಒಬ್ಬರು ಬೇಕಾಗಿದ್ದಾರೆ ಹಾಗಾಗಿ ಶ್ರೀರಾಮುಲು ಅವರ ಜೊತೆ ಡಿಕೆ ಶಿವಕುಮಾರ್ ಚರ್ಚಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಪಕ್ಷ ಹೇಳಿದಂತೆ ಬಂಗಾರು ಹನುಮಂತು ಪರವಾಗಿ ಕೆಲಸ ಮಾಡಿದ್ದೇನೆ. ಶ್ರೀರಾಮುಲು ಸಾಯುವವರೆಗೂ ನನಗೆ ಸ್ನೇಹಿತ ಯಾವುದೇ ಕಾರಣಕ್ಕೂ ಆತ ಶತ್ರು ಆಗಲ್ಲ. ಆದರೆ ಶ್ರೀರಾಮುಲು ಶತ್ರುಗಳೊಂದಿಗೆ ಕೈಜೋಡಿಸಿದ್ದಾರೆ. ಪಕ್ಷ ಬಿಡುವುದು ಇರುವುದು ಶ್ರೀರಾಮುಲು ವೈಯಕ್ತಿಕ ವಿಚಾರ.ಶ್ರೀರಾಮುಲು ಬಿಜೆಪಿಯನ್ನು ಬಿಟ್ಟು ಹೋಗುವುದಾದರೆ ಹೋಗಲಿ ಎಂದರು.
ಆದರೆ ನನ್ನ ಮೇಲೆ ಆರೋಪ ಯಾಕೆ? ಇದು ಎಷ್ಟು ಸರಿ? ನಾನು ಕರ್ಮದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ. ಕರ್ಮ ಹಾಗೂ ಭಗವದ್ಗೀತೆಯಲ್ಲಿ ನಾನು ನಂಬಿಕೆ ಇಟ್ಟಿರುವನು. ಕರ್ಮ ಯಾರನ್ನು ಬಿಡುವುದಿಲ್ಲ. ಜನಾರ್ದನ ರೆಡ್ಡಿ ವಿಜಯೇಂದ್ರ ಬಗ್ಗೆ ಮಾತನಾಡುವುದು ದಡ್ಡತನ. ಅಸಮಾಧಾನಿತರ ಪರ ಸೇರಿಕೊಂಡು ಮಾತನಾಡುವುದು ತಪ್ಪು. ಕೇಂದ್ರದ ಬಿಜೆಪಿ ನಾಯಕರ ಬಳಿ ಹೇಳುವುದು ಸರಿಯಲ್ಲ ಎಂದು ಶ್ರೀರಾಮುಲು ವಿರುದ್ಧ ಜನಾರ್ಧನ್ ರೆಡ್ಡಿ ಅಸಮಾಧಾನ ಹೊರ ಹಾಕಿದರು.
ದಾಖಲೆಗಳ ಸಮೇತ ಮುಂದೆ ಮತ್ತಷ್ಟು ವಿಚಾರಗಳನ್ನ ತಿಳಿಸುತ್ತೇನೆ. ಪಕ್ಷ ಜವಾಬ್ದಾರಿ ಕೊಟ್ಟಾಗ ಕೆಲಸ ಮಾಡಬೇಕು ಪಕ್ಷ ಟಿಕೆಟ್ ಕೊಟ್ಟಾಗ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು. ರಾಮುಲು ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರೆ ಮಾಡುತ್ತೇನೆ. ಪಕ್ಷ ಹೇಳಿದರೆ ಶ್ರೀರಾಮುಲು ಪರವಾಗಿಯೂ ನಾನು ಕೆಲಸ ಮಾಡುತ್ತೇನೆ. ಭಾರತೀಯ ಜನತಾ ಪಕ್ಷದಲ್ಲಿ ನಿಷ್ಠಾವಂತನಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನೊಬ್ಬರ ಮೇಲೆ ಚಾಡಿ ಹೇಳಿಕೊಂಡು ನಾನು ಬೆಳೆಯುವವನಲ್ಲ ಎಂದು ತಿಳಿಸಿದರು.