ದಾವಣಗೆರೆ : ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಒಂದು ಡೀಲ್ ನಡೆದಿತ್ತು, ರಾಜ್ಯದಲ್ಲಿ ಸರ್ಕಾರ ರಚಿಸಲು ಶಿವಕುಮಾರ್ ಮುಖ್ಯಮಂತ್ರಿ ಮತ್ತು ವಿಜಯೇಂದ್ರ ಉಪ ಮುಖ್ಯಮಂತ್ರಿ ಎಂದು ಡೀಲ್ ಆಗಿದ್ದು ಗೊತ್ತಿಲ್ವ? ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ಉಚ್ಚಾಟನೆಯಾದ ಬಳಿಕ ಕ್ಷಮೆ ಕೋರಿ ಪತ್ರ ಬರೆದಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಒಪ್ಪಂದ ಮಾಡಿಕೊಡುವಂತಹ ಬಿವೈ ವಿಜಯೇಂದ್ರ ಅಂತಹ ಮಹಾಭ್ರಷ್ಟನೇ ಪಕ್ಷದಲ್ಲಿದ್ದಾನೆ. ನಾನು ಯಾಕೆ ಇರಬಾರದು? ನಾನು ಯಾರಿಗೂ ಕ್ಷಮೆ ಕೇಳಲ್ಲ, ಪತ್ರ ಬರೆಯಲ್ಲ, ಕೈ ಮುಗಿಯಲ್ಲ ನನಗೆ ಅಂತಹ ಅವಶ್ಯಕತೆಯೂ ಇಲ್ಲ ಎಂದು ಗುಡುಗಿದರು.
ಮುಂದಿನ ನಡೆ ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಇನ್ನೂ ಮೂರು ವರ್ಷ ಇದೆ ನೋಡೋಣ. ಆದರೆ ನನ್ನ ಸತ್ತ ಹೆಣ ಕೂಡ ಕಾಂಗ್ರೆಸ್ ಗೆ ಹೋಗಲ್ಲ. ಅಂತಹ ಅಯೋಗ್ಯ ಕೂಡ ನಾನಲ್ಲ. ಪಾಕಿಸ್ತಾನದ ಪಕ್ಷಕ್ಕೆ ಸೇರುವುದು ಇಲ್ಲ. ಅಲ್ಲಿ ಕೇವಲ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹೊಗಳುವ ಹಿಂದೂಗಳಿದ್ದಾರೆ ಹೊರತು ದೇಶದ ಬಗ್ಗೆ ಆಗಲಿ ಸೈನಿಕರ ಬಗ್ಗೆ ಆಗಲಿ ಹೊಗಳುವ ಯಾವ ಹಿಂದೂಗಳು ಇಲ್ಲ. ಅಂತಹ ಪಕ್ಷಕ್ಕೆ ನಾನು ಕನಸು ಮನಸ್ಸಿನಲ್ಲಿಯೂ ಹೋಗಲ್ಲ. ಬೇಕಾದರೆ ಹೊಸ ಪಕ್ಷ ಕಟ್ಟಿ ಶಕ್ತಿ ತೋರಿಸುತ್ತೇನೆ, ಕಾಂಗ್ರೆಸ್ ಗೆ ಸೇರಲ್ಲ ಎಂದು ಸ್ಪಷ್ಟಪಡಿಸಿದರು.