ಬೆಂಗಳೂರು : ಕಲಬುರ್ಗಿ ಆಳಂದ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿ ಆದೇಶ ಹೊರಡಿಸಿದೆ. ಮತಪಟ್ಟಿಯಿಂದ ಅನಧಿಕೃತವಾಗಿ ಹೆಸರು ಕೈ ಬಿಡಲಾಗಿರುವ ಆರೋಪ ಸಂಬಂಧ 21.02.2023 ರಂದು ನೀಡಿದ ದೂರಿನ ಆಧಾರದ ಮೇಲೆ ಕಲ್ಬುರ್ಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ 26/2023 ಕಲಂ. 182, 419, 464, 465 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ತನಿಖೆಗಾಗಿ ಸಿಐಡಿ ಅಪರ ಪೊಲೀಸ್ ಮಹಾನಿರ್ದೇಶಕರಾದ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್ ಐಟಿ ರಚನೆ ಮಾಡಲಾಗಿದೆ. ಸಿಐಡಿ ಎಸ್ ಪಿ ಸೈದುಲು ಅದಾವತ್ ಮತ್ತು ಸಿಐಡಿ ಎಸ್ ಪಿ ಶುಭಾನ್ವಿತ ಎಸ್ ಐಟಿ ತಂಡದಲ್ಲಿರಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಈ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮತಗಳ್ಳತನದ ಆರೋಪ ಮಾಡಿದ್ದರು.
ಈ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಇತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಲು ಎಸ್ ಐಟಿ ತನಿಖಾ ತಂಡವನ್ನು ರಚಿಸಲಾಗಿದೆ. ವಿಶೇಷ ತನಿಖಾ ತಂಡಕ್ಕೆ ಕರ್ನಾಟಕ ರಾಜ್ಯ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ, ಪೊಲೀಸ್ ಠಾಣಾಧಿಕಾರವನ್ನು ನೀಡಲಾಗಿದೆ. ಸಿಐಡಿಯ ಈ ವಿಶೇಷ ತನಿಖಾ ತಂಡಕ್ಕೆ ಆಳಂದ ಪ್ರಕರಣವೂ ಸೇರಿದಂತೆ ಹಾಗೂ ಈ ಸಂಬಂಧ ಕರ್ನಾಟಕ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಇತರ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ನಡೆಸಲು ಸೂಚಿಸಲಾಗಿದೆ.