ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಬುಧವಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಕ್ಕರೆ ರಫ್ತನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 30, 2026ರವರೆಗೆ (ಅಥವಾ ಮುಂದಿನ ಆದೇಶದವರೆಗೆ) ನಿಷೇಧಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯವು (DGFT) ಈ ಆದೇಶ ಹೊರಡಿಸಿದೆ. ಈ ನಿಷೇಧವು ಕಚ್ಚಾ, ಬಿಳಿ ಮತ್ತು ಸಂಸ್ಕರಿಸಿದ ಸಕ್ಕರೆಗೆ ಅನ್ವಯಿಸುತ್ತದೆ. ಇದುವರೆಗೆ ‘ನಿರ್ಬಂಧಿತ’ (Restricted) ವಿಭಾಗದಲ್ಲಿದ್ದ ಸಕ್ಕರೆ ರಫ್ತನ್ನು ಈಗ ‘ನಿಷೇಧಿತ’ (Prohibited) ವರ್ಗಕ್ಕೆ ಸೇರಿಸಲಾಗಿದ್ದು, ಇದು ಸರ್ಕಾರದ ನೀತಿಯಲ್ಲಿನ ಪ್ರಮುಖ ಬದಲಾವಣೆಯಾಗಿದೆ.
ಮೇ 13ಕ್ಕಿಂತ ಮೊದಲು ಹಡಗುಗಳಿಗೆ ಲೋಡಿಂಗ್ ಆರಂಭವಾಗಿದ್ದರೆ ಅಥವಾ ಈಗಾಗಲೇ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರವಾಗಿದ್ದರೆ ಅಂತಹ ರಫ್ತುಗಳಿಗೆ ಅವಕಾಶ ನೀಡಲಾಗುತ್ತದೆ.ಇತರ ದೇಶಗಳ ಆಹಾರ ಭದ್ರತೆಯ ಅಗತ್ಯತೆಗಳನ್ನು ಪೂರೈಸಲು ಆಯಾ ಸರ್ಕಾರಗಳ ವಿನಂತಿಯ ಮೇರೆಗೆ ಭಾರತ ಸರ್ಕಾರವು ವಿಶೇಷ ಅನುಮತಿ ನೀಡಿದಲ್ಲಿ ರಫ್ತು ಮಾಡಬಹುದು.
ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್‌ಗೆ (EU) ಅಸ್ತಿತ್ವದಲ್ಲಿರುವ ಸುಂಕದ ದರದ ಕೋಟಾದ ಅಡಿಯಲ್ಲಿ ರಫ್ತು ಮಾಡಲು ಈ ನಿಷೇಧ ಅನ್ವಯಿಸುವುದಿಲ್ಲ.
ನಿಷೇಧಕ್ಕೆ ಕಾರಣಗಳೇನು?
ದಾಸ್ತಾನು ಕೊರತೆ: 2025-26ರ ಹಂಗಾಮಿನಲ್ಲಿ ಭಾರತವು ಸುಮಾರು 275 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ನಿರೀಕ್ಷೆಯಿದೆ. ಹಳೆಯ ದಾಸ್ತಾನು ಸೇರಿ ಒಟ್ಟು 325 ಲಕ್ಷ ಟನ್ ಲಭ್ಯವಿರಲಿದೆ. ಆದರೆ ದೇಶೀಯ ಬೇಡಿಕೆಯು 280 ಲಕ್ಷ ಟನ್‌ಗಳಷ್ಟಿದ್ದು, ಹಂಗಾಮಿನ ಅಂತ್ಯಕ್ಕೆ ಕೇವಲ 45 ಲಕ್ಷ ಟನ್ ಉಳಿಯಬಹುದು. ಇದು 2016-17ರ ನಂತರದ ಅತ್ಯಂತ ಕಡಿಮೆ ದಾಸ್ತಾನು ಮಟ್ಟವಾಗಿದೆ.
ಹವಾಮಾನ ವೈಪರೀತ್ಯ: ಎಲ್ ನಿನೋ (El Niño) ಪರಿಣಾಮದಿಂದಾಗಿ ಮುಂದಿನ ವರ್ಷ ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, 2026-27ರ ಸಾಲಿನಲ್ಲಿ ಕಬ್ಬಿನ ಉತ್ಪಾದನೆ ಮತ್ತಷ್ಟು ಕುಸಿಯುವ ಭೀತಿಯಿದೆ.
ಜಾಗತಿಕ ಅಸ್ಥಿರತೆ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ರಸಗೊಬ್ಬರಗಳ ಕೊರತೆಯಾಗಬಹುದು ಎಂಬ ಆತಂಕವೂ ಸರ್ಕಾರದ ಈ ಮುನ್ನೆಚ್ಚರಿಕಾ ಕ್ರಮಕ್ಕೆ ಕಾರಣವಾಗಿದೆ.








