ಬೆಂಗಳೂರು : ಡೀಸೆಲ್ ದರ ಹಾಗೂ ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ, ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಎ.14 ಅಂದರೆ ನಾಳೆ ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಸಜ್ಜಾಗಿದೆ.
ಈ ಕುರಿತು ಜಿ.ಆರ್. ಷಣ್ಮುಖಪ್ಪ ಮಾತನಾಡಿ, ಏ.14 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಈಗಾಗಲೇ ಕರೆ ನೀಡಲಾಗಿದೆ. ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿದಂತೆ ರಾಜ್ಯವ್ಯಾಪಿ ಬೆಂಬಲಿಸಿದ್ದಾರೆ. ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ. ಕೆಲ ಬಣದ ನಾಯಕರು ಸರ್ಕಾರದೊಟ್ಟಿಗೆ ಕೈಜೋಡಿಸಿದ್ದು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಹಲವು ಪೆಟ್ರೋಲ್ ಬಂಕ್ ಸಂಘಟನೆಗಳು ಸೇರಿದಂತೆ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಹಾಗಾಗಿ ಮುಷ್ಕರ ನಡೆಸುವುದು ನಿಶ್ಚಿತ ಎಂದು ಹೇಳಿದರು.
ಅಲ್ಲದೇ ನಾಳೆಯಿಂದ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಲಾರಿಗಳಿದ್ದು ಮುಷ್ಕರಕ್ಕೆ ಬೆಂಬಲಿಸುವ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಲಿವೆ. ಹೊರರಾಜ್ಯಗಳಿಂದಲೂ ಲಾರಿಗಳು ಬರಲು ಬಿಡುವುದಿಲ್ಲ ಅಂದು ವಾಣಿಜ್ಯ ಸೇರಿದಂತೆ ಎಲ್ಲ ಮಾದರಿಯ ಸರಕು ಸೇವೆಗಳು ಸ್ತಬ್ಧಗೊಳ್ಳಲಿವೆ ಎಂದರು.