ಕಲಬುರಗಿ : ರಾಜ್ಯದಲ್ಲಿ ಇಂದು ಮತ್ತೊಂದು ಭೀಕರವಾದ ರಸ್ತೆ ಅಪಘಾತವಾಗಿದ್ದು ಚಾಲಕನ ನಿಯಂತ್ರಣ ತಪ್ಪಿ ಕಾರು ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಚಲಿಸುತ್ತಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಲ್ಲಮ್ಮ ಗೇಟ್ ಸಮೀಪದಲ್ಲಿ ಬುಧವಾರ ನಡೆದಿದೆ.
ಅಪಘಾತದಲ್ಲಿ ಮೃತ ಪಟ್ಟವರನ್ನು ಸೇಡಂ ತಾಲ್ಲೂಕಿನ ಮೀನಹಾಬಾಳ ಗ್ರಾಮದ ಯಲ್ಲಪ್ಪ ಹಳಿಮನಿ (45), ತೊಟ್ನಳ್ಳಿ ಗ್ರಾಮದ ಸದಾಶಿವ (65) ಮತ್ತು ಮೀನಹಾಬಾಳ ಗ್ರಾಮದ ಭೀಮಶಾ (44) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮೀನಹಾಬಾಳ ಗ್ರಾಮದ ಮೌನೇಶ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ತಿಳಿದು ಬಂದಿದೆ.
ನಾಲ್ವರು ಪ್ರಯಾಣಿಕರಿದ್ದ ಕಾರು ಚಿಂಚೋಳಿ ಮಾರ್ಗದಿಂದ ಸೇಡಂ ಕಡೆಗೆ ಹೊರಟಿತ್ತು ಎನ್ನಲಾಗಿದೆ. ವೇಗವಾಗಿ ಕಾರು ಚಲಾಯಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅದ್ದೂರು ಶ್ರೀನಿವಾಸಲು, ಸೇಡಂ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲಿನೆ ನಡೆಸಿದರು. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.