ಮೈಸೂರು : ಬೆಂಗಳೂರಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದ ಪ್ರಕರಣದ ಬಳಿಕ ಇದೀಗ ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ತಾಯಿಯನ್ನು ಕೊಲೆ ಮಾಡುವುದಾಗಿ ಹೆದರಿಸಿ, ಅಪ್ರಾಪ್ತೆ ಅತ್ಯಾಚಾರವೆಸಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ನಡೆದಿದೆ.
10ನೇ ತರಗತಿ ಓದುತ್ತಿರುವ ಬಾಲಕಿಯ ಹಿಂದೆ ಬೈಕ್ನಲ್ಲಿ ಫಾಲೋ ಮಾಡಿದ ಆರೋಪಿ, ಆಕೆಯನ್ನು ಒಲೈಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆದರೆ, ಸ್ಪಂದಿಸದಿದ್ದಾಗ ಹೇಳಿದಂತೆ ಕೇಳದಿದ್ದರೆ ನಿನ್ನ ತಾಯಿಯನ್ನು ಸಾಯಿಸುತ್ತೇನೆ ಎಂದು ಹೆದರಿಸಿದ್ದಾನೆ. ಆಗ ಭಯಗೊಂಡ ಬಾಲಕಿ ಆತ ಕರೆದೆಡೆಗೆ ಹೋಗಿದ್ದಾಳೆ. ಬಳಿಕ ಅವಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂಜನಗೂಡು ಪಟ್ಟಣದ ಯುವಕನೇ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಈತ 15 ವರ್ಷದ ಅಪ್ರಾಪ್ತೆಗೆ ಬೆದರಿಕೆ ಹಾಕಿ, ಅತ್ಯಾಚಾರ ಎಸಗಿದ್ದಲ್ಲದೆ, ನಗ್ನ ಫೋಟೋಗಳನ್ನು ಬಾಲಕಿಯು ಓದುತ್ತಿರುವ ಶಾಲಾ ಮುಖ್ಯಸ್ಥರಿಗೆ ಕಳಿಸಿದ್ದ ಎನ್ನಲಾಗಿದೆ.ಅಲ್ಲದೆ, ಅಪ್ರಾಪ್ತೆಯ ಅಶ್ಲೀಲ ಫೋಟೋಗಳನ್ನು ಸೆರೆಹಿಡಿದುಕೊಂಡು, ಶಾಲಾ ಮುಖ್ಯಸ್ಥರಿಗೆ ಕಳಿಸಿದ್ದಾನೆ. ತದನಂತರ, ಶಾಲೆಯ ಮುಖ್ಯಸ್ಥರು ಬಾಲಕಿಯ ತಾಯಿಯನ್ನು ಕರೆಯಿಸಿ ಮಾಹಿತಿ ನೀಡಿದ್ದಾರೆ.
ಮಗಳನ್ನು ಲೈಂಗಿಕವಾಗಿ ಬಳಸಿಕೊಂಡು, ಫೋಟೋಗಳನ್ನು ಶೇರ್ ಮಾಡಿದ ಯುವಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಾಯಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಕೇಸ್ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.