ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರವಾಸಕ್ಕೆ ಎಂದು ಬಂದಿದ್ದ ವಿದೇಶಿ ಮಹಿಳೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದ್ದು ವರದಿಯಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಪ್ರವಾಸಿತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ಹೋಗುವ ರಸ್ತೆ ಮಧ್ಯದಲ್ಲಿನ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಈ ಘಟನೆ ನಡೆದಿದೆ. ಗಿಟಾರ್ ಬಾರಿಸುತ್ತಾ ಕುಳಿತಿದ್ದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಗುರುವಾರ ತಡರಾತ್ರಿ ಹಲ್ಲೆಯಾಗಿದೆ.
ವಾಯುವಿಹಾರಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ವಿದೇಶಿಯರಿದ್ದ ಗುಂಪಿನ ಮೇಲೆ ದಾಳಿ ಮಾಡಿರುವ ಕೆಲ ಸ್ಥಳೀಯ ಯುವಕರು, ಗುಂಪಿನಲ್ಲಿದ್ದ ಪುರುಷರನ್ನು ಕಾಲುವೆಗೆ ದೂಡಿ, ಒಬ್ಬ ವಿದೇಶಿ ಮತ್ತು ಒಬ್ಬ ಸ್ಥಳೀಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಘಟನೆಯಲ್ಲಿ ಕಾಲುವೆಗೆ ಬಿದ್ದಿದ್ದ ಒಬ್ಬ ಸ್ವದೇಶಿ ಯುವಕ ನಾಪತ್ತೆಯಾಗಿದ್ದು, ಇನ್ನುಳಿದವರಿಗೆ ಗಾಯಗಳಾಗಿವೆ. ಅಮೆರಿಕ ಮೂಲದ ಡೇನಿಯಲ್, ಇಸ್ರೇಲ್ನ ಸೀಮಾ, ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಹಾರ್ಟ್ ಲೈನ್ ಹೋಂ ಸ್ಟೇ ಒಂದರ ಮಾಲಕಿ ಅಂಬಿಕಾ ನಾಯ್ಕ್, ಮಹಾರಾಷ್ಟ್ರದ ನಾಸಿಕ್ನ ಪಂಕಜ್ ಪಟೇಲ್ ಹಾಗೂ ಒಡಿಶಾದ ಬಿ.ಬಾಸ್ ಹಲ್ಲೆಗೆ ಒಳಗಾದವರು ಎಂದು ಪೊಲೀಸರು ತಿಳಿಸಿದ್ದಾರೆ.