ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಗೆ ಮೇ ತಿಂಗಳಿನಲ್ಲಿ ದಿಢೀರ್ ಬ್ರೇಕ್ ಬಿದ್ದಿದೆ. ಈ ತಿಂಗಳು ರಾಜ್ಯ ಸರ್ಕಾರ ನೀಡಬೇಕಾಗಿದ್ದ ತನ್ನ ಪಾಲಿನ ಉಚಿತ ಅಕ್ಕಿಯನ್ನು ವಿತರಿಸಿಲ್ಲ ಎನ್ನಲಾಗುತ್ತಿದ್ದು, ಇದು ಪಡಿತರ ಚೀಟಿದಾರರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಪ್ರಸ್ತುತ ಪಡಿತರ ಕೇಂದ್ರಗಳಲ್ಲಿ ಕೇವಲ ಕೇಂದ್ರ ಸರ್ಕಾರದ ಪಾಲಿನ ಪಡಿತರವನ್ನು ಮಾತ್ರ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ತಲಾ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ನೀಡಬೇಕಾಗಿತ್ತು. ಆದರೆ, ಮೇ ತಿಂಗಳಿನಲ್ಲಿ ಈ ಹೆಚ್ಚುವರಿ ಅಕ್ಕಿ ವಿತರಣೆಯಾಗದೆ ಇರುವುದು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಕೇಂದ್ರ ಸರ್ಕಾರದ ಅನ್ನ ಸುರಕ್ಷಾ ಕಾಯ್ದೆಯಡಿಯ ಕೋಟಾವನ್ನು ಮಾತ್ರ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.
ರಾಮನಗರ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಪಡಿತರ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಲ್ಲಿ ಮೇ ಹಾಗೂ ಜೂನ್ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲಾಗುತ್ತಿದೆ. ಆದರೆ, ಇದರಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಅಕ್ಕಿ ಕೈಬಿಟ್ಟು ಹೋಗಿದೆ. ಮೇ ತಿಂಗಳ ಕೋಟಾದಡಿ ಪ್ರತಿ ಕಾರ್ಡ್‌ದಾರರಿಗೆ 3 ಕೆಜಿ ರಾಗಿ ಹಾಗೂ 2 ಕೆಜಿ ಅಕ್ಕಿಯನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಯಡಿ ಸಿಗಬೇಕಿದ್ದ ಹೆಚ್ಚುವರಿ ಆಹಾರ ಧಾನ್ಯ ಸಿಕ್ಕಿಲ್ಲ.
ಯೋಜನೆಗೆ ತಾಂತ್ರಿಕ ಕಾರಣಗಳು ಅಥವಾ ದಾಸ್ತಾನು ಕೊರತೆಯಿಂದ ಬ್ರೇಕ್ ಬಿದ್ದಿದೆಯೇ ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇನ್ನು ಅಧಿಕೃತ ಸ್ಪಷ್ಟನೆ ಸಿಗಬೇಕಿದೆ. ಬಡ ಕುಟುಂಬಗಳಿಗೆ ಆಸರೆಯಾಗಿದ್ದ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ಈ ತಿಂಗಳು ಸಿಗದೇ ಇರುವುದರಿಂದ, ಸಾರ್ವಜನಿಕರು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ಕಿ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.








