ಬೆಂಗಳೂರು : ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾದಾವರ ಬಳಿ 4.8 ಕೋಟಿ ರೂಪಾಯಿ ನಗದು ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಈ ಒಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸಂಸದ ಡಾ. ಕೆ.ಸುಧಾಕರ್ ಅವರ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಹೌದು ಸಂಸದ ಡಾ.ಕೆ.ಸುಧಾಕರ್ ವಿರುದ್ಧದ 4.8 ಕೋಟಿ ರೂ.ಗಳ ಚುನಾವಣಾ ಅಕ್ರಮದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ನ್ಯಾಯಾಲಯವು ಪ್ರಕರಣ ರದ್ದು ಕೋರಿ ಸುಧಾಕರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ಮಾದನಾಯಕನಹಳ್ಳಿ ಪೊಲೀಸರು ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣ ರದ್ದು ಕೋರಿ ಡಾ.ಕೆ. ಸುಧಾಕರ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾಗಿತ್ತು. ಅದಕ್ಕೆ ಡಾ.ಕೆ. ಸುಧಾಕರ್ ವಿರುದ್ಧ ಐಪಿಸಿ ಸೆಕ್ಷನ್ 171 ‘ಎಫ್’ರಡಿ ಪ್ರಕರಣ ದಾಖಲಿಸಲಾಗಿದೆ. ಇದೇ ಕೋರ್ಟ್ ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾದರೆ ಸೆಕ್ಷನ್ 171 ‘ಎಫ್’ ಅನ್ವಯಿಸಲಾಗದೆಂದು ಆದೇಶ ಮಾಡಿದೆ. ಈ ಹಿಂದೆ ಅಂತಹ ಹಲವು ಪ್ರಕರಣಗಳನ್ನು ಹೈಕೋರ್ಟ್ ರದ್ದು ಮಾಡಿತ್ತು ಎಂದು ವಾದಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ, ನೆಲಮಂಗಲ ಉಪ ವಿಭಾಗದಲ್ಲಿರುವ ಮಾದನಾಯಕನಹಳ್ಳಿ ಪೊಲೀಸರು ಮತ್ತು ದೂರುದಾರ ದಶರಥ ಕುಂಬಾರ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.