ಮಂಗಳೂರು : ಮಂಗಳೂರಿನಲ್ಲಿ ಮ್ಯಾಟ್ರಿಮೋನಿ ಮನ್ಮಥನ ಲೀಲೆ ಇದೀಗ ಬಯಲಾಗಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 9 ಯುವತಿಯರನ್ನು ಮದುವೆಯಾಗಿದ್ದಾನೆ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ ಕಿಲಾಡಿ, ಮದುವೆಯಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ್ದಾನೆ ಸುಶಾಂತ್ ಪೂಜಾರಿ ಎಂಬ ಆರೋಪಿಯಣ್ಣ ಇದೀಗ ಅರೆಸ್ಟ್ ಮಾಡಲಾಗಿದೆ.
ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಆನ್ಲೈನ್ ಮದುವೆ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ 2025 ಫೆ. 2 ರಂದು ಮದುವೆಯಾಗಿದ್ದರು. ಈ ಮಹಿಳೆಯನ್ನು ನಂಬಿಸಿ ಸುಶಾಂತ್ ಪೂಜಾರಿ ಹಂತ ಹಂತವಾಗಿ 6,60,000/- ಹಣವನ್ನು ಪಡೆದುಕೊಂಡಿದ್ದನು. ಮೋಸ ಮಾಡುವ ಉದ್ದೇಶದಿಂದ 2025ರ ನವೆಂಬರ್ 15 ರಿಂದ ನಾಪತ್ತೆಯಾಗಿದ್ದನು.
ನಂತರದ ದಿನಗಳಲ್ಲಿ ಈ ಬಗ್ಗೆ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಹಲವು ಕಡೆಗಳಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ವಂಚಿಸಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದಿದೆ. ಹೀಗಾಗಿ ನೊಂದ ಮಹಿಳೆಯು ಕಾವೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ದೂರು ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದರು.
ಸುಶಾಂತ್ ಪೂಜಾರಿ ಯಾನೆ ಸುಶಾಂತ್ ಅಂಕುಶ್ ಪೂಜಾರಿ ಯಾನೆ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ಫೆ. 5 ರಂದು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಆನ್ಲೈನ್ ಮದುವೆ ಪ್ಲಾಟ್ಫಾರಂ ಮೂಲಕ ಪರಿಚಯ ಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುವುದು ತಿಳಿದುಬಂದಿದೆ. ಉಡುಪಿ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದ.
ಮುಂಬೈನ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುವುದು ತಿಳಿದುಬಂದಿದೆ. ಅದೇ ರೀತಿ ಬೆಂಗಳೂರಿನಲ್ಲೂ ಇಬ್ಬರು ಯುವತಿಗೆ ಮಂಕುಬೂದಿ ಎರಚಿ ಮೋಸ ಮಾಡಿದ್ದಾನೆ. ಅಲ್ಲದೆ, ಕಾರ್ಕಳದ ಓರ್ವ ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ ಈ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನವನ್ನು ವಿಧಿಸಿದೆ.








