ಮಂಡ್ಯ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕವನ್ನು ಹರಿದು ಹಾಕಿ ದೌರ್ಜನ್ಯ ಎಸಗಿರುವ ಘಟನೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೋಲೀಸ್ ಠಾಣಾ ವ್ಯಾಪ್ತಿಯ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಜರುಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ 30 ಗುಂಟೆ ಗ್ರಾಮಠಾಣಾ ಜಾಗವಿದ್ದು, ಈ ಜಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ಈಗಾಗಲೇ ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ಒಂದು ವರ್ಷದ ಹಿಂದೆಯೇ ಗ್ರಾಮದ ದಲಿತ ಮುಖಂಡರು ಸಾಕಷ್ಟು ಮನವಿ ಸಲ್ಲಿಸಿದ್ದಾರೆ.
ಆದರೆ, ಗ್ರಾಮದ ಸವರ್ಣಿಯ ಮುಖಂಡರು ಗ್ರಾಮಠಾಣಾ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೋಮವಾರ ಬೆಳಿಗ್ಗೆ ದಲಿತ ಮುಖಂಡರು ಗ್ರಾಮಠಾಣಾ ಜಾಗದಲ್ಲಿ ಅಂಬೇಡ್ಕರ್ ಅವರ ನಾಮಫಲಕ ಅಳವಡಿಸಲು ಮುಂದಾಗಿದ್ದಾರೆ. ಆದರೆ, ಗ್ರಾಮದ ಕೆಲವು ಸವರ್ಣಿಯ ಮುಖಂಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ನಾಮಫಲಕವನ್ನು ಹರಿದು ಹಾಕಿ ದೌರ್ಜನ್ಯ ಎಸಗಿದ್ದಾರೆ.
ಇದರಿಂದ ಸವರ್ಣಿಯ ಮತ್ತು ದಲಿತರ ಜನಾಂಗದವರ ನಡುವೆ ತೀವ್ರ ಸ್ವರೂಪದ ಗಲಭೆ ಉಂಟಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಕೆ.ಎಂ.ದೊಡ್ಡಿ ಪೋಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ವರದಿ : ಗಿರೀಶ್ ರಾಜ್ ಮಂಡ್ಯ








