ಹುಬ್ಬಳ್ಳಿ : ಪಾಲಕರ ವಿರೋಧದ ನಡುವೆಯೂ ಅನ್ಯ ಜಾತಿ ಯುವಕನೊಂದಿಗೆ ಮದುವೆಯಾಗಿ ಗರ್ಭಿಣಿಯಾಗಿದ್ದ ಮಗಳನ್ನು ತಂದೆ ಹಾಗೂ ಕುಟುಂಬಸ್ಥರು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಮರ್ಯಾದಗೇಡು ಘಟನೆ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಭಾನುವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದೆ. ಯುವತಿಯ ತಂದೆ ಪ್ರಕಾಶ್ ಗೌಡ ಪಾಟೀಲ್, ಈರಣ್ಣಗೌಡ ಹಾಗು ಅರುಣ್ ಬಂಧಿತರು.
ಮಾನ್ಯಾ ಪಾಟೀಲ (19) ಮೃತ ಗರ್ಭಿಣಿ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಯುವಕನ ತಂದೆ, ತಾಯಿ ಸೇರಿದಂತೆ ನಾಲೈದು ಜನ ಗಾಯಗೊಂಡು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರೆಲ್ಲರೂ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೆ ಸಂಬಂಧಪಟ್ಟಂತೆ ಯುವತಿ ತಂದೆ ಪ್ರಕಾಶಗೌಡ ಪಾಟೀಲ, ಕುಟುಂಬದ ವೀರನಗೌಡ ಮತ್ತು ಅರುಣಗೌಡರನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಏಳೆಂಟು ಮಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದ್ದಾರೆ.
ಘಟನೆ ವಿವರ
ಮಾನ್ಯಾ ಹಾಗೂ ಯುವಕ ವಿವೇಕಾನಂದ ದೊಡ್ಡಮನಿ
ಇಬ್ಬರು ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಕುಟುಂಬಸ್ಥರ ತೀವ್ರ ವಿರೋಧವಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನವೂ ನಡೆದಿತ್ತು. ಆದರೂ, 8 ತಿಂಗಳ ಹಿಂದೆ ಇಬ್ಬರು ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದರು. ಯುವತಿ 7 ತಿಂಗಳ ಗರ್ಭಿಣಿಯಾಗಿದ್ದರಿಂದ ದಂಪತಿ ಮರಳಿ ಇನಾಂವೀರಾಪುರ ಗ್ರಾಮಕ್ಕೆ ಬಂದಿದ್ದರು.
ಈ ಸುದ್ದಿ ತಿಳಿದು ಯುವತಿಯ ತಂದೆ ಹಾಗೂ ಆತನ ಕುಟುಂಬಸ್ಥರು ಭಾನುವಾರ ಸಂಜೆ 2 ಗುಂಪುಗಳಲ್ಲಿ ಮನೆ ಹಾಗೂ ಹೊಲಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಯುವಕ ವಿವೇಕಾನಂದ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








