ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಭೀಕರ ಕೊಲೆ ನಡೆದಿದ್ದು, ಕೇವಲ ಮೊಬೈಲ್ ವಿಚಾರಕ್ಕೆ ಜಗಳ ಉಂಟಾಗಿ ಸ್ವಂತ ಅಣ್ಣನ ಮಗನನ್ನೇ ಚಿಕ್ಕಪ್ಪನೊಬ್ಬ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿರಾಗುಟ್ಟಹಳ್ಳಿಯಲ್ಲಿ ಚಿಕ್ಕಪ್ಪ ಅಣ್ಣನ ಮಗನ ತಲೆ ಮೇಲೆ ಕಲ್ಲು ಹಾಕಿ ಸಾಯಿಸಿರುವ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಗ್ರಾಮದ ಸುನಿಲ್ (29) ಎಂದು ತಿಳಿದುಬಂದಿದೆ. ಅವರ ಚಿಕ್ಕಪ್ಪ ರಮೇಶ್ ಕೊಲೆ ಮಾಡಿರುವ ಆರೋಪಿ. ರಮೇಶ್ ಮೊಬೈಲ್ ಅನ್ನು ಸುನಿಲ್ ತೆಗೆದುಕೊಂಡಿದ್ದು ಮತ್ತೆ ವಾಪಸ್ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜೂನ್ 8 ರಂದು ಭಾನುವಾರ ಇಬ್ಬರ ನಡುವೆ ಜಗಳವಾಗಿತ್ತು. ರಾತ್ರಿ ಮಲಗಿದ್ದಾಗ ಸುನಿಲ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.ತೀವ್ರವಾಗಿ ಗಾಯಗೊಂಡಿದ್ದ ಸುನಿಲ್ಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಸೇರಿಸಲಾಗಿತ್ತು. ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಮೇಶ್ ಪರಾರಿಯಾಗಿದ್ದಾನೆ. ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.