ಬೆಂಗಳೂರು : ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ನನ್ನು ಕೊನೆಗೂ ಬಂಧಿಸಲಾಗಿದೆ. ದುಬೈನಿಂದ ದೆಹಲಿಗೆ ಬಂದಿಳಿದ ಜಗದೀಶ್ನನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಈಗಾಗಲೇ 16 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಪ್ರಮುಖ ಆರೋಪಿ ಜಗದೀಶ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕಾರಣ ಬಂಧನ ಸಾಧ್ಯವಾಗಿರಲಿಲ್ಲ. ದೇಶದ ಹಲವೆಡೆ ಆತನ ಪತ್ತೆಗೆ ತೀವ್ರ ಶೋಧ ನಡೆಸಿದ್ದ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು, ಆತನ ಇರುವಿಕೆ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಲುಕ್ ಔಟ್ ಸಕ್ಯೂರ್ಲರ್ (ಎಲ್ಓಸಿ) ಜಾರಿಗೊಳಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ)ದ ಹೆಗಲಿಗೆ ವಹಿಸಲಾಗಿತ್ತು.
ಪ್ರಕರಣದ ಹಿನ್ನೆಲೆ
ಜುಲೈ 15ರಂದು ರಾತ್ರಿ ಹಲಸೂರಿನ ಮನೆಯ ಬಳಿಯೇ ಮಾರಕಾಸ್ತ್ರಗಳಿಂದ ಹೊಡೆದು ಶಿವಪ್ರಕಾಶ್ನನ್ನು ಹತ್ಯೆಗೈಯ್ಯಲಾಗಿತ್ತು. ಕಿತ್ತಕನೂರು ಬಳಿ ಖರೀದಿಸಿದ್ದ ನಿವೇಶನವೊಂದರ ಸಂಬಂಧಿಸಿದಂತೆ ಆರೋಪಿಗಳು ಬಿಕ್ಲು ಶಿವನಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದರು. ತಡರಾತ್ರಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ 8-9 ಮಂದಿ ಮನೆಯ ಮುಂದೆ ಕಾರಿನ ಬಳಿ ನಿಂತಿದ್ದ ಶಿವಪ್ರಕಾಶ್‌ನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಶಿವಪ್ರಕಾಶ್‌ನ ತಾಯಿ ವಿಜಯಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದರು.