ಬೆಂಗಳೂರು : ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಜೂ.3 ರಂದು ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣದ ಬಳಿ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಘಟನೆ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಕೋರ್ಟ್, ಇಂದು ಅರ್ಜಿ ವಿಚಾರಣೆ ನಡೆಸಿ, ಅಮೈಕಸ್ ಕ್ಯೂರಿಯನ್ನಾಗಿ ಹಿರಿಯ ವಕೀಲರಾದ ಸುಶೀಲಾ ಅವರನ್ನು ನೇಮಕ ಮಾಡಿ ಹೈಕೋರ್ಟ್ ಆದೇಶಿಸಿದೆ.
ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಪರ ವಕೀಲರು ಹಾಜರಾಗಿದ್ದರು. ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಕೆ ಮಾಡಿತು. ಇನ್ನು, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಿಚಾರಣೆಯನ್ನು ಅಮೈಕಸ್ ಕ್ಯೂರಿ ನೇಮಕದ ಬಳಿಕ ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾ.ವಿ.ಕಾಮೇಶ್ವರ ರಾವ್, ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಪರಿಹಾರದ ಹಣ ಹೆಚ್ಚಿಸುವಂತೆ ಸಂತ್ರಸ್ತರೂ ಕೂಡ ಅರ್ಜಿ ಸಲ್ಲಿಕೆ ಮಾಡಿದರು. ಸರ್ಕಾರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಹಾರ ನೀಡುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಿಂದ ಮೃತಪಟ್ಟವರಿಗೆ 25 ಲಕ್ಷ ರೂ. ನೀಡಿದೆ. ಆದರೆ, ಸಿಡಿಲು ಬಡಿದು ಮೃತಪಟ್ಟವರಿಗೆ ಇಷ್ಟು ಪರಿಹಾರ ನೀಡಿಲ್ಲ. ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರಿಗೂ ನೀಡಿಲ್ಲ. ಇತರೆ ಘಟನೆಗಳಲ್ಲೂ ಏಕರೂಪದ ಪರಿಹಾರ ನೀಡಲು ಅರ್ಜಿ ಮೂಲಕ ಮನವಿ ಮಾಡಲಾಗಿದೆ.
ಅಲ್ಲದೆ, ವಕೀಲರಾದ ಸುಶೀಲಾ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ಅದರ ಕುರಿತ ಎಲ್ಲ ದಾಖಲೆಗಳ ಮತ್ತು ಸರ್ಕಾರ ಈವರೆಗೂ ಸಲ್ಲಿಸಿರುವ ವಸ್ತುಸ್ಥಿತಿ ವರದಿಯನ್ನು ಒದಗಿಸಲು ರಿಜಿಸ್ಟ್ರಾರ್ ಅವರಿಗೆ ಸೂಚನೆ ನೀಡಿತು. ಬಳಿಕ ಈ ಹಂತದಲ್ಲಿ ಯಾವುದೇ ಅಭಿಪ್ರಾಯ ಹೇಳುವುದಿಲ್ಲ ಎಂದು ಹೈಕೋರ್ಟ್ ಹೇಳಿತು. ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜುಲೈ 1 ಕ್ಕೆ ಮುಂದೂಡಿದೆ.
ಅಮಿಕಸ್ ಕ್ಯೂರಿ ಎಂದರೇನು?
ಅಮಿಕಸ್ ಕ್ಯೂರಿ ಎಂದರೆ “ನ್ಯಾಯಾಲಯದ ಸ್ನೇಹಿತ” ಎಂದರ್ಥ. ಅಮಿಕಸ್ ಕ್ಯೂರಿ ಸಾಮಾನ್ಯವಾಗಿ ಕಾನೂನು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರದ ವ್ಯಕ್ತಿ ಅಥವಾ ಗುಂಪಾಗಿರುತ್ತದೆ. ಆದರೆ ನ್ಯಾಯಾಲಯಕ್ಕೆ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅಥವಾ ದೃಷ್ಟಿಕೋನವನ್ನು ಒದಗಿಸುವ ಮೂಲಕ ಸಹಾಯ ಮಾಡಲು ಅನುಮತಿ ಕೇಳುತ್ತದೆ. ಉದಾಹರಣೆಗೆ, ಇದು ಕಾನೂನಿನ ಬಗ್ಗೆ ಪರಿಣತಿಯನ್ನು ಹೊಂದಿರುವ ವ್ಯಕ್ತಿಯಾಗಿರಬಹುದು, ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯದ ಬಗ್ಗೆ ತಿಳಿದಿರುವ ಗುಂಪಾಗಿರಬಹುದು.