ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರವಾದ ಮರ್ಡರ್ ಆಗಿದ್ದು, ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಹತ್ಯೆಗೈದು ಹೂತುಹಾಕಿದ ಘಟನೆ ಸೊರಬ ತಾಲೂಕಿನ ಜೇಡಗೇರಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಆನವಟ್ಟಿ ಹೋಬಳಿ ಕಾನುಕೊಪ್ಪ ಹೊಸೂರು ಗ್ರಾಮದ ರಾಮಚಂದ್ರ (30) ಕೊಲೆಯಾದ ವ್ಯಕ್ತಿ. ಆತನ ಹಿರಿಯ ಸಹೋದರ ಮಾಲತೇಶ್ ಕೊಲೆ ಆರೋಪಿ.
ಪುತ್ರ ರಾಮಚಂದ್ರ ಕಳೆದ ಸೆಪ್ಟೆಂಬರ್ 8 ರಂದು ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕೆಲವು ದಿನಗಳ ನಂತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪ್ರಕರಣದಲ್ಲಿ ಕಾಣೆಯಾದವನ ಪತ್ತೆಯಾಗಿರಲಿಲ್ಲ. ಆದಾಗ್ಯೂ ಅನುಮಾನ ಬಲವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯ ಜಾಡು ಬದಲಿಸಿದ್ದರು. ಅಲ್ಲದೆ, ಪ್ರಕರಣದಲ್ಲಿ ಸಾಕಷ್ಟು ಸಂಶಯಗಳು ಮೂಡಿದ ಹಿನ್ನೆಲೆಯಲ್ಲಿ ರಾಮಚಂದ್ರ ಅವರ ಸಹೋದರ ಮಾಲತೇಶ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ.
ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ರಾಮಚಂದ್ರ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆಗೆ ಮುಂದಾದಾಗ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಕಾರಣ ರಾಮಚಂದ್ರನನ್ನು ಕೊಂದ ಮಾಲತೇಶ್, ಆತನನ್ನು ತೋಟದಲ್ಲಿ ಹೂತು ಹಾಕಿರೋದು ಗೊತ್ತಾಗಿದೆ. ಮಾಹಿತಿಯ ಆಧಾರದಲ್ಲಿ ತೋಟದಲ್ಲಿ ಗುಂಡಿ ತೆಗೆದು ಪರಿಶೀಲನೆ ನಡೆಸಿದಾಗ ರಾಮಚಂದ್ರನ ಶವ ಪತ್ತೆಯಾಗಿದೆ.
ರಾಮಚಂದ್ರ ಬೇಗ ಮದುವೆಯಾಗಲೆಂದು ಪೂಜೆ ನೆಪದಲ್ಲಿ ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ರಾಮಚಂದ್ರನನ್ನು ಕೆರೆದುಕೊಂಡು ಹೋಗಿದ್ದ. ಪೂಜೆ ನೆಪದಲ್ಲಿ ತಮ್ಮನಿಗೆ ಸರಿಯಾಗಿ ಮದ್ಯ ಕುಡಿಸಿ, ನಂತರ ಕಂಬಕ್ಕೆ ಕಟ್ಟಿ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆಗೂ ಮೊದಲೇ ಶವ ಹೂತು ಹಾಕಲು ಗುಂಡಿ ತೋಡಿ ಇಟ್ಟಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಶವವನ್ನು ಗುಂಡಿಯಲ್ಲಿ ಹೂತು ಹಾಕಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.








