ತುಮಕೂರು : ಇತ್ತೀಚೆಗೆ ಕಾಂಗ್ರೆಸ್ ನಾಯಕ ಈವಿಎಂ ಮಷೀನ್ ನಲ್ಲಿ ವೋಟ್ ಚೂರಿ ಆಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದರು. ಆದರೆ ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಸ್ಪಷ್ಟನೆ ನೀಡುತ್ತಾ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದೆ. ಇದೀಗ ತುಮಕೂರಿನಲ್ಲಿ ನಡೆದ ಸಹಕಾರಿ ಸಂಘದ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯೇ ಬ್ಯಾಲೆಟ್ ಪೇಪರ್ ನಲ್ಲಿ ಅಕ್ರಮ ಎಸಗಿದ್ದು ಕಂಡು ಬಂದಿದೆ.
ಹೌದು ತುಮಕೂರು ಜಿಲ್ಲೆಯ ವಿ.ಎಸ್.ಎಸ್.ಎನ್ ಸೊಸೈಟಿ ಚುನಾವಣೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಸಹಕಾರಿ ಸಂಘದ ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಅಕ್ರಮ ನಡೆದಿದೆ ಎಂದು ಜೆಡಿಎಸ್ ಚುನಾವಣಾ ಏಜೆಂಟ್‌ಗಳು ಆರೋಪಿಸಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಸಂತೇಮಾವತ್ತೂರಿನ ನಿನ್ನೆ ನಡೆದ ವಿ.ಎಸ್.ಎಸ್.ಎನ್ ಸೊಸೈಟಿ ಚುನಾವಣೆಯಲ್ಲಿ ಸ್ವತಃ ಚುನಾವಣಾಧಿಕಾರಿಯೇ ಅಕ್ರಮವಾಗಿ ಬ್ಯಾಲೇಟ್ ಪೇಪರನ್ನು ಮತಪೆಟ್ಟಿಗೆಗೆ ತುಂಬಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ನಿನ್ನೆ ಸಂತೇಮಾವತ್ತೂರಿನ ಸಾಲಗಾರರ 11 ಕ್ಷೇತ್ರಗಳಿಗೆ, 1 ಸಾಮಾನ್ಯ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಆದರೆ ಮತದಾನದ ನಡುವೆ ಒಂದಷ್ಟು ಮತಪತ್ರಗಳನ್ನು ಚುನಾವಣಾಧಿಕಾರಿ ಸುನೀಲ್ ಮತಪೆಟ್ಟಿಗೆಗೆ ಹಾಕಿದ್ದು, ಇದನ್ನ ಜೆಡಿಎಸ್ ಚುನಾವಣಾ ಏಜೆಂಟ್‌ಗಳು ಗಮನಿಸಿದ್ದಾರೆ. ತಡೆದು ನೋಡಿದಾಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತಹಾಕಿದ್ದ ಮತಪತ್ರಗಳು ಸಿಕ್ಕಿದ್ದು, ಮತ ಪತ್ರಗಳ ಬಂಡಲ್ ಹಿಡಿದು, ಚುನಾವಣಾಧಿಕಾರಿಗಳು ಸುನೀಲ್‌ನನ್ನು ಕೂಡಿಹಾಕದ್ದಾರೆ. ನಂತರ ವಿಚಾರ ತಿಳಿದು ಎಎಸ್‌ಪಿ ಪುರುಷೋತ್ತಮ್ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಸುನೀಲ್‌ನನ್ನು ಪೊಲೀಸರು ಕರೆದೋಯ್ದಿದ್ದಾರೆ.
ಮತಗಟ್ಟೆಯಿಂದ ಹೊರಗೆ ಕಾಂಗ್ರೆಸ್ ಪರ ಹಾಕಿದ್ದ ಮತ ಪತ್ರಗಳನ್ನ ಚುನಾವಣಾಧಿಕಾರಿಗೆನೀಡಿದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ಸಾಕ್ಷಿ ಸಮೇತ ಇದನ್ನು ಕಂಡಿದ್ದಾರೆ. ಚುನಾವಣೆಗೂ ಮುನ್ನವೇ ಮತಪತ್ರಗಳನ್ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಯ ಬಳಿಕ ಸಹಕಾರ ಇಲಾಖೆ ಅಧಿಕಾರಿಗಳು ತಕ್ಷಣವೇ ಚುನಾವಣೆ ರದ್ದು ಮಾಡಿದ್ದಾರೆ.








