ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಸಚಿವ ಸ್ಥಾನ ಬಿಟ್ಟುಕೊಡು ಎಂದು ಹೈಕಮಾಂಡ್ ಸೂಚಿಸಿದರೆ ನಾನು ಈ ಕ್ಷಣವೇ ರಾಜೀನಾಮೆ ನೀಡಲು ಸಿದ್ಧ” ಎಂದು ಹೇಳುವ ಮೂಲಕ ಅವರು ಕುತೂಹಲ ಮೂಡಿಸಿದ್ದಾರೆ.
ಬೇಡಿಕೆ ಇಟ್ಟವನಲ್ಲ ನಾನು: ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಆಗಬೇಕು ಎನ್ನುವುದು ಕೆಲವು ಶಾಸಕರ ವೈಯಕ್ತಿಕ ಅಭಿಪ್ರಾಯವಾಗಿರಬಹುದು. ಆದರೆ, ನಾನು ಸಚಿವ ಸ್ಥಾನಕ್ಕಾಗಿ ಎಂದಿಗೂ ಯಾರ ಮುಂದೆಯೂ ಬೇಡಿಕೆ ಇಟ್ಟಿಲ್ಲ. ಪಕ್ಷ ನನಗೆ ಜವಾಬ್ದಾರಿ ನೀಡಿದೆ, ಅದನ್ನು ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ನನ್ನನ್ನು ಸ್ಥಾನ ಬಿಟ್ಟುಕೊಡಲು ಸೂಚಿಸಿದರೆ, ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
20 ವರ್ಷ ಅಧಿಕಾರವಿಲ್ಲದೆ ಕಳೆದಿದ್ದೇನೆ: ತಮ್ಮ ರಾಜಕೀಯ ಜೀವನದ ಹಳೆಯ ದಿನಗಳನ್ನು ಸ್ಮರಿಸಿದ ಸಚಿವರು, “ನಾನು ಸತತವಾಗಿ ಅಧಿಕಾರಕ್ಕಾಗಿ ಹಪಹಪಿಸುವ ವ್ಯಕ್ತಿಯಲ್ಲ. ಈ ಹಿಂದೆ ನಾನು ಸತತ 20 ವರ್ಷಗಳ ಕಾಲ ಸಚಿವ ಸ್ಥಾನವಿಲ್ಲದೆಯೇ ಶಾಸಕನಾಗಿ ಕೆಲಸ ಮಾಡಿದ್ದೇನೆ. ಅಧಿಕಾರವಿಲ್ಲದಿದ್ದರೂ ಜನರ ಸೇವೆ ಮಾಡುವುದು ನನಗೆ ಗೊತ್ತು. ಹಾಗಾಗಿ ಈಗ ಸಚಿವ ಸ್ಥಾನ ಹೋದರೆ ನನಗೆ ಯಾವುದೇ ಸಂಕಟವಿಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಹಿರಿಯ ಶಾಸಕರ ಒತ್ತಾಯ: ಸರ್ಕಾರದಲ್ಲಿ ಎರಡೂವರೆ ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಸಂಪುಟದಲ್ಲಿ ಬದಲಾವಣೆ ತರಬೇಕು ಮತ್ತು ಹಿರಿಯರಿಗೆ ಅವಕಾಶ ನೀಡಬೇಕು ಎಂಬ ಧ್ವನಿ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಈ ಒತ್ತಡಕ್ಕೆ ಪ್ರತಿಕ್ರಿಯಿಸಿರುವ ಶಿವಾನಂದ ಪಾಟೀಲ್, ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಮಾರುಕಟ್ಟೆ ಗಾಗಿ ದಾಸನಪುರದಲ್ಲಿ ಒಟ್ಟು 68 ಎಕರೆ ಜಾಗ ಇದೆ. ಪಾರ್ಕಿಂಗ್ ಜಾಗಕ್ಕಾಗಿ 10 ಎಕರೆ ಜಾಗ LEES ಪಡೆದಿದ್ದೇವೆ. ಇದರಿಂದ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದೆ. ಉತ್ತರ ಕರ್ನಾಟಕದಿಂದ ಬರುವ ರೈತರಿಗೂ ಸಹ ಅನುಕೂಲ ಆಗಲಿದೆ ಎಂದು ಬೆಂಗಳೂರಿನಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದರು.








