ಯಾದಗಿರಿ : ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದು, ಸಚಿವ ಸಂಪುಟ ಪುನಾರಚನೆ ಆಗುತ್ತೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರೆದು ಸಿಎಂ ಸ್ಥಾನ ಕೊಟ್ಟರೆ ನಾಳೆ ನಾನೂ ಸಹ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ತಮ್ಮ ಸಿಎಂ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಜನರ ವಿಚಾರದ ಮೇಲೆ ಸಂಪುಟ ಪುನರ್ ರಚನೆ ಆಗುವುದಿಲ್ಲ. ಅದೇನಿದ್ದರೂ ಹೈಕಮಾಂಡ್ ತೀರ್ಮಾನ ದಂತೆ ಆಗುತ್ತದೆ. ಸರ್ಜರಿ ಆದೇಲೆ 10 ರಿಂದ 15 ಸಚಿವರು ಬದಲಾವಣೆ ಆದರೂ ಆಗಬಹುದು. ಅವರಿಗೆ ಯಾವ ಖಾತೆ ಕೊಡಬೇಕು ಅನ್ನೋದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ ಎಂದರು. ಕೆಪಿಸಿಸಿ ಅಧ್ಯಕ್ಷಸ್ಥಾನದ ಆಕಾಂಕ್ಷಿ ಬಹಳಷ್ಟು ಜನ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನೂ ಆಗುತ್ತೇನೆ. ಶಾಸಕ ಚೆನ್ನಾರೆಡ್ಡಿ ಅವರೂ ಆಗುತ್ತಾರೆ. ಸ್ಥಾನ ನೀಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟದ್ದು ಎಂದು ಅವರು ತಿಳಿಸಿದರು.