ಬೆಂಗಳೂರು : ರಾಜ್ಯದಲ್ಲಿ ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವುದನ್ನು ತಡೆಯಲು ಮತ್ತು ಮದ್ಯ ಖರೀದಿ ಮಾಡುವವರ ವಯಸ್ಸಿನ ದೃಢೀಕರಣವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಹೆಜ್ಜೆ ಇರಿಸಿದೆ. ಮದ್ಯದ ಅಂಗಡಿ ಹಾಗೂ ಬಾರ್ಗಳಲ್ಲಿ ಗ್ರಾಹಕರ ವಯಸ್ಸಿನ ಪುರಾವೆ ಪರಿಶೀಲಿಸುವುದನ್ನು ಕಡ್ಡಾಯಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಬಾರ್ ಮಾಲೀಕರ ಸಂಘಕ್ಕೆ ನೋಟಿಸ್ ಜಾರಿ ಮಾಡಿದೆ.
ಅಪ್ರಾಪ್ತರಿಗೆ ಮದ್ಯ ಪೂರೈಕೆ ಮತ್ತು ಬ್ರಿವರಿಂಗ್ ಕಂಪನಿಗಳು ಸೇರಿದಂತೆ ಮದ್ಯ ಸರಬರಾಜು ಸಂಸ್ಥೆಗಳಲ್ಲಿ ಅವರ ಪ್ರವೇಶಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಆದೇಶ ಹೊರಡಿಸಿರುವ ಹೈಕೋರ್ಟ್, ಈ ಪಿಡುಗಿನಿಂದ ಯುವಕರು ವಿಶೇಷವಾಗಿ ಅಪ್ರಾಪ್ತ ವಯಸ್ಸಿನವರನ್ನು ರಕ್ಷಿಸುವುದು ಕೇವಲ ಶಾಸನಾತ್ಮಕ ಕರ್ತವ್ಯವಲ್ಲ, ಬದಲಿಗೆ ನೈತಿಕ ಕರ್ತವ್ಯವೂ ಆಗಿದೆ ಎಂದು ಸಾರಿದೆ.
ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡಿದರೂ ಅಂತಹ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದೂ ಹೇಳಿದೆ. ಬ್ರಿವರೀಸ್ ಮತ್ತು ಅಂತಹದ್ದೇ ಮದ್ಯ ಮಾರಾಟ ಸಂಸ್ಥೆಗಳು ತನ್ನಲ್ಲಿಗೆ ಬರುವವರ ವಯಸ್ಸು ಕಡ್ಡಾಯವಾಗಿ ಪರಿಶೀಲಿಸಬೇಕು. ಇದಕ್ಕಾಗಿ ಅಗತ್ಯ ಶಿಷ್ಟಾಚಾರಗಳನ್ನು (ನಿಯಮಗಳನ್ನು) ಆರಂಭಿಸಬೇಕು. ಅಪ್ರಾಪ್ತರ ಮದ್ಯ ಸೇವನೆ ಅಥವಾ ಅವರಿಗೆ ಮದ್ಯ ಪೂರೈಕೆ ಅಷ್ಟೇ ಅಲ್ಲ, ಮದ್ಯ ಸರಬರಾಜು ಮಾಡುವಾಗಲೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿದೆ ಹೇಳಿದೆ.








