ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಪಾಲಿಟಿಕ್ಸ್ ಹೆಚ್ಚಾಗಿದ್ದು ಕಳೆದ ಕೆಲವು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿ ಇರುವಾಗಲೇ ಈ ಒಂದು ಔತಣಕೂಟ ಆಯೋಜನೆ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿತು. ಇದರ ಬೆನ್ನಲ್ಲೇ ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಔತಣಕೂಟ ಆಯೋಜನೆ ಮಾಡಿದ್ದಾರೆ.
ಹೌದು ನಾಳೆ ರಾತ್ರಿ ಖಾಸಗಿ ಹೋಟೆಲ್ ನಲ್ಲಿ ಜಿ ಪರಮೇಶ್ವರ್ ಅವರ ವತಿಯಿಂದ ಔತಣಕೂಟ ಏರ್ಪಡಿಸಲಾಗಿದೆ.ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಒಂದು ಔತಣಕೂಟ ನಡೆಯಲಿದೆ. ಸಚಿವರು ಹಾಗೂ ಶಾಸಕರಿಗೆ ಜಿ ಪರಮೇಶ್ವರ್ ಅವರು ಆಹ್ವಾನ ನೀಡಿರುವ ಮಾಹಿತಿ ತಿಳಿದು ಬಂದಿದೆ. ವಿದೇಶ ಪ್ರವಾಸದಿಂದ ವಾಪಸ್ ಆದ ಬಳಿಕ ಜಿ. ಪರಮೇಶ್ವರ್ ಡಿನ್ನರ್ ಆಯೋಜನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅಹಿಂದ ಸಚಿವರು ಹಾಗೂ ಎಲ್ಲಾ ಶಾಸಕರು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಜಿ.ಪರಮೇಶ್ವರ್ ನಾನು ನಾಳೆ ಡಿನ್ನರ್ ಮಾತ್ರ ಕೊಡುತ್ತಿದ್ದೇನೆ. ಆದರೆ ಅದು ಪಾರ್ಟಿಯಲ್ಲ ಎಂದು ಡಿನ್ನರ್ ಆಯೋಜನೆ ಬಗ್ಗೆ ಚಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಡಿನ್ನರ್ ಪಾರ್ಟಿ ಬಗ್ಗೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಎಸ್.ಸಿ, ಎಸ್.ಟಿ ಸಮಾವೇಶ ಮಾಡಬೇಕು ಅಂತ ಅಂದುಕೊಂಡಿದ್ದೇವೆ. ಸಮುದಾಯ ಸಚಿವರು ಮತ್ತು ಶಾಸಕರನ್ನು ಕರೆದಿದ್ದೇವೆ.ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸಲಾಗುತ್ತದೆ. ಎಸ್‌ಸಿ/ಎಸ್‌ಟಿ ಬಿಟ್ಟು ಬೇರೆಯವರು ಬರಬಾರದು ಅಂತ ಏನಿಲ್ಲ ಎಂದು ತಿಳಿಸಿದರು.