ರಾಯಚೂರು : ಈ ಬಾರಿ ಲೋಕಸಭಾ ಚುನಾವಣೆಗೆ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೊಡಬೇಡಿ ಎಂದು ನಾನೇ ಹೇಳಿದ್ದೆ ಎಂದು ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಅಮೇರಿಕಾದಲ್ಲಿ ಮೀಸಲಾತಿ ಕುರಿತು ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಖಂಡಿಸಿ ರಾಹುಲ್ ಗಾಂಧಿ ರಾಜೀನಾಮೆಗೆ ಆಗ್ರಹಿಸಿ ರಾಯಚೂರಿನಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಅನಂತ ಕುಮಾರ್ ಹೆಗಡೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ವಿಚಾರವನ್ನು ಪ್ರಸ್ತಾಪಿಸಿದರು.
ಹೌದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮಂತ್ರಿ ಇದ್ದಾಗಲೇ ಮೋದಿಜಿಯವರು ಅನಂತ್ ಕುಮಾರ್ ಅವರನ್ನು ಪಾರ್ಲಿಮೆಂಟಿಗೆ ಕರೆಸಿ ದೇಶದ ಜನರ ಕ್ಷಮೆ ಕೇಳಿಸಿದ್ದರು. ಆದ್ರೆ, ಅವರು ಪುನಃ ಸಂವಿಧಾನ ಬದಲಾವಣೆ ಮಾತನಾಡಿದರು. ಹಾಗಾಗಿ ನಾನೇ ನಮ್ಮ ಮುಖಂಡರಿಗೆ ಖಡಕ್ ಆಗಿ ಹೇಳಿದ್ದೆ. ಯಾವುದೇ ಕಾರಣಕ್ಕೂ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೊಡಬೇಡಿ ಎಂದಿದ್ದೆ ಎಂದರು.
ಅಂದು ನಾವು ಸಂವಿಧಾನದ ಕುರಿತು ಹೇಳಿಕೆ ನೀಡಿದವರಿಗೆ ಟಿಕೆಟ್ ನೀಡದೆ ನಮ್ಮ ಬದ್ಧತೆ ಏನೆಂಬುದನ್ನು ಸಾಭೀತು ಮಾಡಿದ್ದೆವು. ಈಗ ನಿಮ್ಮ ಸರದಿ, ನಿಮ್ಮ ತಾಕತ್ತು ತೋರಿಸಿ ವಿದೇಶದಲ್ಲಿ ಕುಳಿತು ಮೀಸಲಾತಿ ತೆಗೆದು ಹಾಕುವ ಮಾತನಾಡಿರುವ ರಾಹುಲ್ ಗಾಂಧಿಯನ್ನು ಪಕ್ಷದಿಂದ ತೆಗೆದು ಹಾಕಿ ಎಂದು ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.