ಹುಬ್ಬಳ್ಳಿ : ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲಿ ಚುನಾವಣೆ ನಡೆಯಲಿದ್ದು ನೂತನ ಅಧ್ಯಕ್ಷ ಆಯ್ಕೆ ಆಗಲಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ತೀವ್ರ ತಾರಕಕ್ಕೆ ಏರಿದ್ದು, ಇದೀಗ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಎಸ್ ಯಡಿಯೂರಪ್ಪ ಹಾಗೂ ಅವರ ಚೇಲಾಗಳು ಎಷ್ಟು ಲೂಟಿ ಮಾಡಿದ್ದಾರೆ ಎನ್ನುವುದರ ಕುರಿತು ಎಲ್ಲಾ ದಾಖಲೆಗಳು ನನ್ನ ಬಳಿ ಇವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾವು ಸಿದ್ಧ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾವು ಚುನಾವಣೆ ಮಾಡೇ ಮಾಡುತ್ತೇವೆ. ಅಭ್ಯರ್ಥಿ ಯಾರೇ ಅಗಲಿ ನಾವು ಚುನಾವಣೆ ಮಾಡುತ್ತೇವೆ.
ವಿಜಯೇಂದ್ರನನ್ನು ಬದಲಾವಣೆ ಮಾಡಲು ನಮ್ಮ ಹೋರಾಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ನನ್ನ ವಿರುದ್ಧ 100 ದೂರು ಕೊಟ್ಟರು ನಾನು ಹೆದರುವುದಿಲ್ಲ. ನಮ್ಮ ಟೀಂ ಚುನಾವಣೆಗೆ ರೆಡಿ ಇದೆ. ಭ್ರಷ್ಟ ಕುಟುಂಬ ಬಿಜೆಪಿಯಿಂದ ಮುಕ್ತವಾಗಬೇಕು ಬಿಎಸ್ ಯಡಿಯೂರಪ್ಪ ಕುಟುಂಬ ಹಾಗೂ ಅವರ ಚೇಲಾಗಳಿಂದ ಲೂಟಿ ಆಗಿದೆ. ಲೂಟಿ ಮಾಡಿರುವ ದಾಖಲೆಗಳು ನನ್ನ ಬಳಿ ಇವೆ. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಚುನಾವಣೆ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.