ಬೆಂಗಳೂರು : ಒಂದು ಕಡೆ ರಾಜ್ಯದಲ್ಲಿ ಮಹತ್ವದ ಜಾತಿ ಗಣತಿ ಜಾರಿ ಸಂಬಂಧ ಜಟಾಪಟಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರು ನಾನು 2028 ರಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು 2028ರ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಾನು ಮಹಾನ್ ನಾಯಕ ಅಲ್ಲ. ಈಗ ಸಿಎಂ ಕ್ಯಾಂಡಿಡೇಟ್ ಅಲ್ಲ. ಆದರೆ 2028ಕ್ಕೆ ಮುಖ್ಯಮಂತ್ರಿಯಾಗುವ ಆಸೆಯನ್ನು ಇಟ್ಟುಕೊಂಡಿದ್ದೇನೆ. ಈಗ ನಾನೇನು ಒತ್ತಡ ಹಾಕುತ್ತಿಲ್ಲ ನಮ್ಮದೇನಿದ್ದರೂ 2028ಕ್ಕೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಇನ್ನು ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿ ಮುಂದೂಡಿದ ವಿಚಾರವಾಗಿ, ಮಾತನಾಡಿದ ಸತೀಶ್ ಜಾರಕಿಹೊಳಿ, ಈ ವಿಷಯದ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಕೆಲವರು ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ. ತರಾತುರಿ ಇಲ್ಲ ಎಲ್ಲರ ಅಭಿಪ್ರಾಯ ಪಡೆದು ಜಾತಿಗಣತಿ ಜಾರಿ ಮಾಡಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.
ಇನ್ನು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ವಿಚಾರವಾಗಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕಾಲಚಕ್ರ ತಿರುಗುತ್ತಲೇ ಇರುತ್ತದೆ ಡಿಸಿಎಂ ಡಿಕೆ ಶಿವಕುಮಾರ್ ಏನೋ ಒಂದು ಉದ್ದೇಶ ಇಟ್ಟುಕೊಂಡು ಮಾಡಿರಬಹುದು. ಉತ್ತರ ಪ್ರದೇಶದಲ್ಲೂ ಕೂಡ ಹಲವು ಬದಲಾವಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆಯೂ ಮುಖ್ಯಮಂತ್ರಿ ಬಳಿ ಕೇಳಿದ್ದೇವೆ. ಸಮಯ ಇಲ್ಲದಿದ್ದಾಗ ಏನು ಆಗುವುದಿಲ್ಲ. ಜಿಗಿಯ ಬೇಕಾದರೆ ನೀರು ಇರಬೇಕು ನೀರು ಇದ್ದಾಗ ಜಿಗಿಯಬೇಕು. ನೀರು ಬರುವವರೆಗೆ ಕಾಯುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.