ವಾಷಿಂಗ್ಟನ್ : ಉನ್ನತ ವ್ಯಾಸಂಗಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಎಂದು ಭಾರತೀಯರು ವಿದೇಶಕ್ಕೆ ತೆರಳುತ್ತಾರೆ. ಆದರೆ ವಿದೇಶದಲ್ಲಿ ಭಾರತೀಯರ ಮೇಲೆ ನಿರಂತರವಾಗಿ ಹಲ್ಲೆ ಹಾಗೂ ದಾಳಿ ನಡೆಯುತ್ತಲೇ ಇರುತ್ತೆ. ಇದೀಗ ಹೈದರಾಬಾದ್ ಮೂಲದ ಯುವಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ.
ಹೌದು ಹೈದ್ರಾಬಾದ್ ಮೂಲದ ಯುವಕ ರವಿತೇಜ (26) ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಈ ಒಂದು ಭೀಕರ ಹತ್ಯೆಯು ಅಮೆರಿಕಾದ ವಾಷಿಂಗ್ಟನ್ ಡಿಸಿಯ ಗ್ಯಾಸ್ ಸ್ಟೇಷನ್ ನಲ್ಲಿ ನಡೆದಿದೆ. ಹೈದರಾಬಾದ್‌ನ ಆರ್‌ಕೆ ಪುರಂ ಗ್ರೀನ್ ಹಿಲ್ಸ್ ಕಾಲೋನಿಯ ನಿವಾಸಿಯಾಗಿದ್ದು, ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ 2022ರಲ್ಲಿ ಅಮೆರಿಕಗೆ ತೆರಳಿದ್ದರು.
ಉನ್ನತ ವ್ಯಾಸಂಗ ಶಿಕ್ಷಣ ಮುಗಿಸಿದ ಬಳಿಕ ರವಿತೇಜ ಅವರು ಅಲ್ಲಿಯೇ ಉದ್ಯೋಗಕ್ಕಾಗಿ ಅರಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆಗೈದಿದ್ದಾರೆ. ಸ್ಥಳೀಯ ಪೊಲೀಸರು ದಾಳಿಯ ಹಿಂದಿನ ಉದ್ದೇಶವನ್ನು ತನಿಖೆ ಮಾಡುತ್ತಿದ್ದಾರೆ ಮತ್ತು ದುಷ್ಕರ್ಮಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.