ಹುಬ್ಬಳ್ಳಿ : ಕಳೆದ ವರ್ಷ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ಇಡೀ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಒಂದು ಕೇಸ್ ಗೆ ಸಂಬಂಧಿಸಿದಂತೆ ಕೊಲೆ ಆರೋಪಿ ಫಯಾಜ್ ನನ್ನು ಕಾಲೇಜಿನಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲೀಕ್ ಹೋರಾಟ ಮಾಡಿದ್ದರು.ಇದೀಗ ಕೊಲೆ ಆರೋಪಿ ವಿದ್ಯಾರ್ಥಿ ಫಯಾಜ್ ಅಮಾನತು ಮಾಡಿಸಿ ಅಮಾನತು ಪತ್ರ ಪಡೆದುಕೊಂಡಿದ್ದಾರೆ.ಇದೆ ವೇಳೆ ಇದುವರೆಗೆ ಫಯಾಜ್ ಎನ್ನುವ ವಿದ್ಯಾರ್ಥಿಯನ್ನು ಅಮಾನತು ಮಾಡದ ಪ್ರಿನ್ಸಿಪಾಲ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಪಿಸಿ ಜಾಬಿನ್ ಕಾಲೇಜ್ನಲ್ಲಿ ಫಯಾಜ್ 2022ರಲ್ಲಿ BCA ವ್ಯಾಸಂಗ ಮಾಡುತಿದ್ದ. 5 ಮತ್ತು 6ನೇ ಸೆಮಿಸ್ಟರ್ನಲ್ಲಿ ಕೆಲ ವಿಷಯಗಳಲ್ಲಿ ಫೇಲ್ ಕೂಡ ಆಗಿದ್ದ. ಇನ್ಮುಂದೆ ಫಯಾಜ್ ಕಾಲೇಜ್ಗೆ ಬರಲು ಬಿಡಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಕಳೆದ ವರ್ಷ ಏ.18ರಂದು ನೇಹಾ ಅವರ ಕಾಲೇಜಿನ ಆವರಣದಲ್ಲೇ ಹಂತಕ ಫೈಯಾಜ್ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದ. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.
ಪ್ರಭಾವಿ ಶಾಸಕರ ಕೈವಾಡ ಆರೋಪ
ಇನ್ನು ನೇಹಾ ಹಿರೇಮಠ ಅವರ ಪ್ರಕರಣದಲ್ಲಿ ಪ್ರಭಾವಿ ಸಚಿವರ ಕೈವಾಡ ಇದೆ ಎಂದು ಸಹ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಆರೋಪ ಮಾಡಿದ್ದಾರೆ. ಆದರೆ ಆ ಶಾಸಕ ಯಾರು ಎನ್ನುವುದನ್ನು ಅವರು ಹೇಳಿಲ್ಲ. ಈ ಹಿಂದೆಯೂ ಮುತಾಲಿಕ್ ಈ ಆರೋಪವನ್ನು ಮಾಡಿದ್ದರು. ಇದೀಗ ಫಯಾಜ್ ಅಮಾನತು ಮಾಡುವಂತೆ ಆಗ್ರಹಿಸಿ ಪಿಸಿ ಜಾಬಿನ್ ಕಾಲೇಜ್ ಬಳಿ ಬಂದ ಮೇಲೆ ಮತ್ತೆ ಇದೇ ವಿಷಯವನ್ನು ಹೇಳಿದ್ದಾರೆ. 2024ರ ಏಪ್ರಿಲ್ 18ರಂದು ನೇಹಾ ಎನ್ನುವ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿತ್ತು.