ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಕರ್ನಾಟಕ ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಸ್ಥಳಗಳನ್ನು ಒಳಗೊಂಡ ರಾಷ್ಟ್ರವ್ಯಾಪಿ ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ್ಯಪ್ ಆಧಾರಿತ ಮೋಸದ ಹೂಡಿಕೆ ಯೋಜನೆ – ಎಚ್ಪಿಜೆಡ್ ಟೋಕನ್ ಅಪ್ಲಿಕೇಶನ್ಗೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಈ ಕ್ರಮ ಕೈಗೊಂಡಿದೆ.
ಶೋಧದ ಸಮಯದಲ್ಲಿ, ಮೊಬೈಲ್ ಫೋನ್ಗಳು, ಕಂಪ್ಯೂಟರ್ ಹಾರ್ಡ್ ಡ್ರೈವ್ಗಳು, ಸಿಮ್ ಕಾರ್ಡ್ಗಳು, ಎಟಿಎಂ / ಡೆಬಿಟ್ ಕಾರ್ಡ್ಗಳು, ಇಮೇಲ್ ಖಾತೆಗಳು ಮತ್ತು ವಿವಿಧ ದೋಷಾರೋಪಣೆ ದಾಖಲೆಗಳು ಸೇರಿದಂತೆ ನಿರ್ಣಾಯಕ ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಬುಧವಾರ (ಮೇ 01) ತಿಳಿಸಿದೆ. ಎಚ್ಪಿಜೆಡ್ ಟೋಕನ್ ಅಪ್ಲಿಕೇಶನ್ ಒಳಗೊಂಡ ಮೋಸದ ಹೂಡಿಕೆ ಯೋಜನೆಯಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಎರಡು ಖಾಸಗಿ ಕಂಪನಿಗಳು ಮತ್ತು ಅವುಗಳ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಸಿಬಿಐ ಪ್ರಕಾರ, ಆರೋಪಿಗಳ ಹೆಸರುಗಳು ಶಿಗು ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಲಿಲಿಯನ್ ಟೆಕ್ನೋಕ್ಯಾಬ್ ಪ್ರೈವೇಟ್ ಲಿಮಿಟೆಡ್ (ಎರಡೂ ಖಾಸಗಿ ಕಂಪನಿಗಳು) ಮತ್ತು ಅವುಗಳ ನಿರ್ದೇಶಕರು. ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ಶೋಧ ನಡೆಸಿದೆ.
ಏನಿದು ಪ್ರಕರಣ?
ಎಚ್ಪಿಜೆಡ್ ಅಪ್ಲಿಕೇಶನ್ ಆಧಾರಿತ ಟೋಕನ್ ಆಗಿದ್ದು, ಬಿಟ್ಕಾಯಿನ್ ಮತ್ತು ಇತರ ಕ್ರಿಪ್ಟೋ ಕರೆನ್ಸಿಗಳಿಗಾಗಿ ಗಣಿಗಾರಿಕೆ ಯಂತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಬಳಕೆದಾರರಿಗೆ ದೊಡ್ಡ ಲಾಭವನ್ನು ನೀಡುತ್ತದೆ. ಬಿಟ್ ಕಾಯಿನ್ ಗಣಿಗಾರಿಕೆಯಲ್ಲಿ ತಮ್ಮ ಹೂಡಿಕೆಯ ಮೇಲೆ ಭಾರಿ ಆದಾಯದ ನೆಪದಲ್ಲಿ ಎಚ್ ಪಿಜೆಡ್ ಟೋಕನ್ ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡಲು ಸಂತ್ರಸ್ತರನ್ನು ಆಕರ್ಷಿಸುವ ವಿಧಾನವನ್ನು ವಂಚಕರು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.