ಹಾಸನ : ಹಾಸನದಲ್ಲಿ ಪತಿ ಹಾಗೂ ಅತ್ತೆ ಮಾವ ಅವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ ಒಬ್ಬಳು ನೇಣು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸಕಲೇಶಪುರ ತಾಲೂಕಿನ ಧನ್ಯಶ್ರೀ (20) ಎಂದು ತಿಳಿದುಬಂದಿದೆ. ಕಳೆದ 2 ವರ್ಷದ ಹಿಂದೆ ಧನ್ಯಶ್ರೀ ಹಾಗೂ ಪ್ರೇಮ್‌ಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ಪ್ರೇಮ್‌ಕುಮಾರ್ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ತವರು ಮನೆಗೆ ಹೋಗಿದ್ದ ಧನ್ಯಶ್ರೀ ಭಾನುವಾರ ಅತ್ತೆ ಮನೆಗೆ ವಾಪಸ್ ಬಂದಿದ್ದಳು.
ಆ ವೇಳೆ ಯಾಕೆ ವರದಕ್ಷಿಣೆ ತಂದಿಲ್ಲ ಎಂದು ಜಗಳ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಿದ್ದ.ಇದೇ ಸಮಯದಲ್ಲಿ ಪತಿಯೊಂದಿಗೆ ಅತ್ತೆ ಭವಾನಿ, ಮಾವ ಪ್ರದೀಪ್ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ಮಹಿಳೆ ಸೋಮವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.