ಜೋಹನ್ಸ್ ಬರ್ಗ್ : ಕಳೆದ ಎರಡು ದಿನಗಳಹಿಂದೆಯಷ್ಟೇ ಆಸ್ಟ್ರೇಲಿಯಾದಲ್ಲಿ ಉಗ್ರರು ಸಾರ್ವಜನಿಕರ ಮೇಲೆ ಗುಂಡಿನ ದಾಳಿ ಎಸಗಿದ ಘಟನೆ ಮರೆಯಾಗುವ ಮುನ್ನವೇ ಸೌತ್ ಆಫ್ರಿಕಾದಲ್ಲಿ ಬಂದೂಕುದಾರಿಗಳಿಂದ ಭೀಕರ ದಾಳಿಯಾಗಿದೆ. ಜೋಹಾನ್ಸ್ಬರ್ಗ್ನ ಹೊರವಲಯದ ಚಿನ್ನದ ಗಣಿ ಸಮೀಪ ಇರುವ ಬೆಕ್ಕೆರ್ಸ್ಡನ್ ಟೌನ್ಶಿಪ್ ಬಳಿ ಆಗಂತುಕ ಬಂದೂಕುದಾರಿಗಳು ಸಾರ್ವಜನಿಕರ ಮೇಲೆ ದಾಳಿ ಎಸಗಿದ್ದಾರೆ. ಈ ಘಟನೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. ಹತ್ತು ಜನರು ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಬೆಕ್ಕೆರ್ಸ್ಡಲ್ ಬಾರ್ ಮೇಲೆ ದಾಳಿಕೋರರು ನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ಎಸಗಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 1 ಗಂಟೆಯಲ್ಲಿ ಈ ಘಟನೆ ನಡೆದಿದೆ. ಭಾರತೀಯ ಕಾಲಮಾನ ಬೆಳಗ್ಗೆ 4:30ರ ಸಮಯ ಆಗಿರಬಹುದು. ಈ ಗುಂಡಿನ ದಾಳಿಯಲ್ಲಿ ಬಲಿಯಾದ ಒಂಬತ್ತು ಮಂದಿಯಲ್ಲಿ ಮೂವರು ಬಾರ್ನ ಒಳಗೆಯೇ ಅಸು ನೀಗಿದ್ಧಾರೆ. ಇನ್ನುಳಿದವರು ಹೊರಗೆ ತಪ್ಪಿಸಿಕೊಳ್ಳಲು ಹೋಗುವಾಗ ಗುಂಡೇಟಿನಿಂದ ಸತ್ತಿದ್ದಾರೆ.
ಇದೇ ಡಿಸೆಂಬರ್ 6ರಂದು ಸೌತ್ ಆಫ್ರಿಕಾದ ಪ್ರಿಟೋರಿಯಾ ನಗರದ ಬಳಿಯೂ ಪಬ್ವೊಂದರ ಮೇಲೆ ಕ್ರಿಮಿನಲ್ಗಳು ದಾಳಿ ಎಸಗಿ ಹಲವರನ್ನು ಬಲಿಪಡೆದಿದ್ದರು. ಆವತ್ತಿನ ದಾಳಿಯಲ್ಲಿ ಮೂವರು ಮಕ್ಕಳೂ ಬಲಿಯಾಗಿದ್ದರು. ಅವರಲ್ಲಿ ಮೂರು ವರ್ಷದ ಮಗುವೂ ಸೇರಿದೆ. ವಲಸೆ ಕಾರ್ಮಿಕರ ಹಾಸ್ಟೆಲ್ನೊಳಗೆ ಇದ್ದ ಪಬ್ ಮೇಲೆ ಆ ದಾಳಿಯಾಗಿತ್ತು.








