ಉಡುಪಿ: ಕುಡಿದ ಅಮಲಿನಲ್ಲಿ ನಡೆದ ಗಲಾಟೆಯು ವೃದ್ಧೆಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸೋಮವಾರ (ಮಾ.09) ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಕೆನರಾಡಿಯಲ್ಲಿ ನಡೆದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಣಿಪುರ ಗ್ರಾಮದ ಅರಬಿ ಕೆನರಾಡಿ ನಿವಾಸಿ ವನಜಾ ಪೂಜಾರ್ತಿ (60) ಕೊಲೆಯಾದ ದುರ್ದೈವಿ. ವಲೇರಿಯನ್ ಮೆಂಡೋನ್ಸಾ ಹಾಗೂ ಪ್ರವೀಣ್ ಮೆಂಡೋನ್ಸಾ ಬಂಧಿತ ಆರೋಪಿಗಳು. ಇವರಿಬ್ಬರು ಆಗಾಗ ವನಜಾ ಪೂಜಾರ್ತಿ ಅವರ ಜತೆ ಮದ್ಯ ಸೇವನೆ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಮೃತ ವನಜಾ ಪೂಜಾರ್ತಿ ಆರೋಪಿ ವಲೇರಿಯನ್ ಮೆಂಡೊನ್ಸಾ ಅವರ ಮನೆಯಲ್ಲಿ ಆಗಾಗ್ಗೆ ಮದ್ಯ ಸೇವನೆ ಮಾಡುತ್ತಿದ್ದರು. ಮಾರ್ಚ್ 9ರಂದು ಸಂಜೆಯಿಂದ ಮಾರ್ಚ್ 10ರ ಬೆಳಿಗ್ಗೆವರೆಗೂ ಎಂದಿನಂತೆ ಮದ್ಯ ಸೇವಿಸುತ್ತಿದ್ದಾಗ ಇವರ ನಡುವೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಕುಡಿದ ಅಮಲಿನಲ್ಲಿ ಗಲಾಟೆ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಆರೋಪಿಗಳು ಹರಿತವಾದ ಆಯುಧದಿಂದ ವನಜಾ ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ವರದಿ ತಿಳಿಸಿದೆ.








