ಶಿವಮೊಗ್ಗ : ನಿನ್ನೆ ರಾತ್ರಿ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿ ನಡೆದಿದೆ. ಮೃತನನ್ನು ಶಿವಮೊಗ್ಗದ ಹೊಸಮನೆ ಬಡಾವಣೆ 6ನೇ ತಿರುವಿನ ನಿವಾಸಿ ಶ್ರೀನಿವಾಸ್ (36) ಎಂದು ಗುರುತಿಸಲಾಗಿದೆ.
ಶ್ರೀನಿವಾಸ್ ಗಾರೆ ಕೆಲಸ ಮಾಡುತ್ತಿದ್ದ. ಗಾಜನೂರಿನಲ್ಲೂ ಸಹ ಗಾರೆ ಕೆಲಸಕ್ಕೆ ಹೋಗಿದ್ದ ಈತ ಕಳೆದ ಮೂರು ದಿನಗಳಿಂದ ಅಲ್ಲಿಯೇ ಇದ್ದ. ನಿನ್ನೆ ರಾತ್ರಿ ಗಾಜನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಪಕ್ಕದಲ್ಲಿ ಆತ ಇನ್ನೋರ್ವನ ಜೊತೆ ಮದ್ಯ ಸೇವಿಸುತ್ತ ಕುಳಿತಿರುವುದನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಯಾವ ಕಾರಣಕ್ಕೆ ಕೊಲೆ ನಡೆದಿದೆ. ಕೊಲೆ ಮಾಡಿರುವುದು ಯಾರೆಂಬುದು ಇನ್ನೂ ತಿಳಿದು ಬಂದಿಲ್ಲ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.








