ಬೆಂಗಳೂರು : ಕೇವಲ ಐವತ್ತು ಸಾವಿರ ಮಾಮೂಲಿ ಹಣಕ್ಕಾಗಿ ಕಿಡಿಗೇಡಿಗಳು ವ್ಯಕ್ತಿ ಒಬ್ಬರನ್ನು ಮಕ್ಕಳ ಎದುರಲ್ಲಿಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಮೆಕ್ಯಾನಿಕ್ ಆಗಿದ್ದ ರಶೀದ್ ಪಾಷಾ (45) ಕೊಲೆಗೀಡಾದ ವ್ಯಕ್ತಿ. ಮೂವರು ಕಿಡಿಗೇಡಿಗಳಿಂದ ಕೃತ್ಯ ನಡೆದಿದ್ದು, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅಂಗಡಿಗೆ ಹೊಸ ಮೋಲ್ಡ್ ಹಾಕಿಸಿದ್ದ ರಶೀದ್ ಬಳಿ ಸ್ಥಳೀಯ ಕೆಲ ಕಿಡಿಗೇಡಿಗಳು ಭಾನುವಾರ ಬೆಳಗ್ಗೆ ಬಂದು ಐವತ್ತು ಸಾವಿರ ರೂಪಾಯಿ ತಮಗೆ ಕೊಡುವಂತೆ ಪೀಡಿಸಿದ್ದರು. ಆದರೆ ಹಣ ನೀಡಲು ರಶೀದ್ ನಿರಾಕರಿಸಿದಾಗ ಮಾತಿನ ಚಕಮಕಿ ನಡೆದಿದೆ. ಅದೇ ಜಿದ್ದಿನಲ್ಲಿ ರಾತ್ರಿ 8.30ರ ಸುಮಾರಿಗೆ ಮತ್ತೆ ಮೂವರು ಆರೋಪಿಗಳ ಗ್ಯಾಂಗ್ ಬಂದಿದೆ.
ರಶೀದ್ ಅವರ ಇಬ್ಬರು ಮಕ್ಕಳ ಮುಂದೆಯೇ ಬ್ಯಾಟ್ ಮತ್ತು ಬೊಂಬಿನಿಂದ ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ತೀವ್ರವಾಗಿ ಗಾಯಗೊಂಡಿದ್ದ ರಶೀದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಕೇ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








