ಮೈಸೂರು : ಮೈಸೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಖಾಸಗಿ ಶಾಲೆಯ ವಾಹನ ಪಂಚರಾಗಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ 16 ಮಕ್ಕಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಪಿರಿಯಾಪಟ್ಟಣ ಬಳಿಯ ಕಂಪಲಪುರದ ಖಾಸಗಿ ಶಾಲೆಯ ವ್ಯಾನ್ ವಿವಿಧ ಗ್ರಾಮಗಳಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೊರಟಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಹಬ್ಬನಕುಪ್ಪೆ ಗ್ರಾಮದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿದೆ.
ಗಾಯಗೊಂಡ ಮಕ್ಕಳಿಗೆ ಹುಣಸೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಗ್ರಾಮಸ್ಥರು ಆಗಮಿಸಿ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದರು.