ರಾಯಚೂರು : ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ಧಿ ಆದಂತಹ ಚಿಂತಕ ಕೆ ಎಸ್ ಭಗವಾನ್ ಅವರು ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದೂ ಅನ್ನುವುದು ಒಂದು ಅವಮಾನಕರ ಶಬ್ದ ಎಂದು ಭಗವಾನ್ ಅವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ರಾಯಚೂರಿನ ದೇವದುರ್ಗದ ಕನಕಗುರುಪೀಠ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಹಿಂದೂ ಅನ್ನೋದು ಅವಮಾನಕರ ಶಬ್ದ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದೂ ಅಂತ ಚಿಂತಕ ಕೆ.ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದೂ ಪದಕ್ಕೆ ಯಾರೂ ಹೀನನಾಗಿದ್ದಾರೊ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದೂ ಅಂತ ಇದೆ. ಹಾಗಾಗಿ ಹಿಂದೂ ಅನ್ನೋ ಶಬ್ದ ಬಹಳ ಅಪಮಾನಕರವಾಗಿದೆ. ಚಾತುರ್ವಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಸಂವಿಧಾನ ತೆಗೆದು ಹಾಕಲು ನಮ್ಮ ದೇಶದ ಜನ ಅವಕಾಶ ನೀಡಬಾರದು. ಮನುಸ್ಮೃತಿಯನ್ನ ವಾಪಸ್ ತರಬಾರದು.
ಮನುಸ್ಮೃತಿಯನ್ನ ಬಾಬಾ ಸಾಹೇಬರು, ಪೆರಿಯಾರ್ ಸುಟ್ಟು ಹಾಕಿದರು. ಸಂವಿಧಾನ ಪರ ಹೋರಾಡಬೇಕು ಮನುಸ್ಮೃತಿಯನ್ನ ತಿರಸ್ಕರಿಸಬೇಕು.ಹಿಂದೂ ಶಬ್ದ ಬಂದಿದ್ದು 1030ನೇ ಇಸವಿಯಲ್ಲಿ. ಪರ್ಷಿಯನ್ ಲೇಖಕ ಆಲ್ಬರೋನಿ ಭಾರತದ ಬಗ್ಗೆ ಬರೆಯುತ್ತಾ ಸಿಂಧೂ ನದಿಯನ್ನ ಹಿಂದೂ ಅಂತ ಕರೆದರು. ಪರ್ಷಿಯನ್ ಭಾಷೆಯಲ್ಲಿ ‘ಸ’ ಕಾರ ಇಲ್ವಂತೆ, ‘ಸ’ ಕಾರ ‘ಹ’ ಕಾರ ಆಗುತ್ತಂತೆ. ಮುಂದೆ ಅಕ್ಬರ್‌ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ ಎಂದು ಹೆಸರು ಬಂತು. ಹೀಗಾಗಿ ರಾಮಾಯಣ, ಮಹಾಭಾರತ, ಪುರಾಣ, ವೇದ ಗ್ರಂಥಗಳಲ್ಲಿ ಹಿಂದೂ ಅನ್ನೋ ಹೆಸರಿಲ್ಲ ಎಂದರು.