ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಈಗ ಜಾಮೀನು ಮಂಜೂರು ಮಾಡಿದೆ.
ಆನೇಕಲ್ ತಾಲೂಕಿನ ಹುಲಿಮಂಗಲ ಪೋಡು ಗ್ರಾಮದ ನಿವಾಸಿ ಸರ್ಬಾನು ಖಾತೂನ್ (25) ಎಂಬುವವರೇ ಜಾಮೀನು ಪಡೆದ ಮಹಿಳೆ. ಇವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠವು ಈ ಆದೇಶವನ್ನು ಹೊರಡಿಸಿದೆ.
ನ್ಯಾಯಾಲಯದ ವೀಕ್ಷಣೆ ಏನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರಮುಖಾಂಶಗಳನ್ನು ಮಂಡಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠವು ಈ ಕೆಳಗಿನ ಅಂಶಗಳ ಆಧಾರದ ಮೇಲೆ ಜಾಮೀನು ನೀಡಿದೆ. ಅರ್ಜಿದಾರ ಮಹಿಳೆಗೆ ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ. ತಾಯಿಯಾಗಿ ಆ ಮಕ್ಕಳ ಪೋಷಣೆಯ ಜವಾಬ್ದಾರಿ ಆಕೆಯ ಮೇಲಿದೆ.ಪ್ರಕರಣದ ಸತ್ಯಾಸತ್ಯತೆ ಹಾಗೂ ಘಟನೆಯ ಸಂದರ್ಭಗಳನ್ನು ಗಮನಿಸಿ, ಸೂಕ್ತ ಷರತ್ತುಗಳೊಂದಿಗೆ ಜಾಮೀನು ನೀಡುವುದು ಸಮಂಜಸ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಘಟನೆಯ ಹಿನ್ನೆಲೆ:
ಹುಲಿಮಂಗಲ ಪೋಡು ಬಳಿಯ ಶೆಡ್ನಲ್ಲಿ ವಾಸವಿದ್ದ ಸರ್ಬಾನು ಖಾತೂನ್, ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ವಿವಾದಕ್ಕೀಡಾಗಿದ್ದರು. ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ಮಹಿಳೆಯನ್ನು ಮಾತನಾಡಿಸಿ ‘ಭಾರತ್ ಮಾತಾ ಕೀ ಜೈ’ ಎನ್ನುತ್ತಾರೆ. ಇದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ಮಹಿಳೆ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗುತ್ತಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿದ್ದ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದರು. ಸದ್ಯ ಹೈಕೋರ್ಟ್ ಆದೇಶದಿಂದ ಮಹಿಳೆಗೆ ರಿಲೀಫ್ ಸಿಕ್ಕಂತಾಗಿದೆ.








