ಮೈಸೂರು : ಒಂದು ಕಡೆ ದಾಖಲೆಯ 17ನೇ ಬಾರಿ ಬಜೆಟನ್ನು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಇನ್ನೊಂದು ಕಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.ಇದರ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಒಂದು ವೇಳೆ ಸಿಎಂ ಸ್ಥಾನ ಬಿಡು ಎಂದರೆ ತಕ್ಷಣವೇ ಬಿಡುತ್ತೇನೆ. ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ನೀಡಿದರು.
ಮೈಸೂರಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಈಗ 17ನೇ ಬಜೆಟ್ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ಹೆಚ್ಚು ಬಜೆಟ್ ಮಂಡಿಸಿರುವುದು ನಾನೇ. ಹೈಕಮಾಂಡ್ ಅವಕಾಶ ಕೊಟ್ಟರೆ ಇನ್ನು ಮುಂದೆಯೂ ಬಜೆಟ್ ಮಂಡಿಸುತ್ತೇನೆ. ಅವರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೈಕಮಾಂಡ್ ಮೇಲೆ ವಿಶ್ವಾಸ ಇದೆ. ಅವರ ಮೇಲೆ ವಿಶ್ವಾಸ ಇರಲೇಬೇಕು. ಅದನ್ನು ಬಿಟ್ಟು ನಿಮ್ಮ ಮೇಲೆ ವಿಶ್ವಾಸ ಇಡುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಅಲ್ಲದೇ, ಬಜೆಟ್ ಮಂಡನೆ ಮೂಲಕ ರೆಕಾರ್ಡ್ ಮುರಿಯುವುದು ಮುಖ್ಯವಲ್ಲ. ಜನರು ಅವಕಾಶ ಕೊಟ್ಟರೆ ಮುಂದೆಯೂ ಬಜೆಟ್ ಮಂಡಿಸುತ್ತೇನೆ. ನೀವು ಏನೇ ಪ್ರಶ್ನೆ ಕೇಳಿದರೂ ನಾನು ವಾಸ್ತವ ಬಿಟ್ಟು ಮಾತನಾಡುವುದಿಲ್ಲ. ಇಡೀ ರಾಜ್ಯದ ಜನರಿಗೆ ಆಸೆ ಇದೆ. ಯಾರು ಏನೇ ಹೇಳಿದರೂ ಕೊನೆಯದಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ಬಜೆಟ್ ಒಂದು ವರ್ಗಕ್ಕೆ ಸೀಮಿತ ಎನ್ನುವ ಟೀಕೆಗೆ ಉತ್ತರಿಸಿ, ಸಿದ್ದರಾಮಯ್ಯ ಬಜೆಟ್ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸಾಮಾಜಿಕ ನ್ಯಾಯದಡಿ ಬಜೆಟ್ ಮಂಡನೆ ಮಾಡಿದ್ದೇವೆ. ಬಜೆಟ್ ಇಡೀ ರಾಜ್ಯದ ಅಭಿವೃದ್ಧಿಯ ಬಜೆಟ್ ಆಗಿದೆ. ಆದರೆ ಕೇಂದ್ರ ಸರ್ಕಾರ ನಮಗೆ ಕೊಡುವ ದುಡ್ಡನ್ನು ಕೊಟ್ಟಿಲ್ಲ. ಆದ್ದರಿಂದ ನಮಗೆ ಹೊರೆಯಾಗಿದೆ ಎಂದರು.
ಸಾಲ ಮಾಡಿ ಬಜೆಟ್ ಮಂಡಿಸಿದ್ದಾರೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಮೋದಿ ಎಷ್ಟು ಸಾಲ ಮಾಡಿದ್ದಾರೆ ಎಂಬುವುದು ಗೊತ್ತೇ? ಸಾಲ ಮಾಡದೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಮ್ಮ ಸಾಲವು ಕೂಡ ಫೈನಾನ್ಸ್ ಮಿತಿಯಲ್ಲಿದೆ. ಸಾಲ ಯಾವಾಗಲೂ ಶೇ.25ರ ಒಳಗೆ ಇರಬೇಕು. ನಾವು ಶೇ.24ರಷ್ಟು ಸಾಲ ಮಾಡಿದ್ದೇವೆ ಎಂದರು.
ಕೇಂದ್ರ ಸರ್ಕಾರ ಎಷ್ಟು ಸಾಲ ಮಾಡಿದೆ ಎಂಬುದು ಅಶೋಕ್ಗೆ ಗೊತ್ತಾ? ಪ್ರಧಾನಿ ಮೋದಿ ಅವರು ಬಂದ ಮೇಲೆ 11 ವರ್ಷಗಳಲ್ಲಿ 165 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಶೇ.55.6ರಷ್ಟು ಸಾಲ ಮೋದಿ ಮಾಡಿದ್ದಾರೆ. ಆದರೆ ನಾವು ಆರ್ಥಿಕ ಶಿಸ್ತಿನ ಮಿತಿಯಲ್ಲಿ ಸಾಲ ಮಾಡಿ ಅಭಿವೃದ್ಧಿಗೆ ಹಣ ಕೊಡುತ್ತಿದ್ದೇವೆ. ಆದರೆ ಬಿಜೆಪಿ ಅವರ ಮಿತಿ ಆರ್ಥಿಕ ಸ್ಥಿತಿಗಿಂತ ಹೆಚ್ಚಾಗಿದೆ. ನಾವು ಮಾಡಿರುವ ಸಾಲ ಆರ್ಥಿಕ ಮಿತಿ ಒಳಗಿದೆ ಎಂದು ಸಿಎಂ ಹೇಳಿದರು.








