ಬೆಂಗಳೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆ, ಇತ್ತ ಕೇಂದ್ರ ಸರ್ಕಾರ ಅಲರ್ಟ್ ಆಗಿ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಜಲಾಶಯಗಳು, ಅಣೆಕಟ್ಟುಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರದ ಸೂಚನೆಯಂತೆ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯತಿಳಿಸಿದರು.
ಮಂಡ್ಯ ಜಿಲ್ಲಾ ಪ್ರವಾಸದ ವೇಳೆ ಬೆಂಗಳೂರಿಂದ ತಾಲೂಕಿನ ಗೆಜ್ಜೆಲಗೆರೆ ಗ್ರಾಮದ ಸಮೀಪದ ಹೆಲಿಪ್ಯಾಡ್ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸುವ ಮೂಲಕ ಭಯೋತ್ಪಾದಕರ ಅಡಗು ತಾಣಗಳನ್ನು ಧ್ವಂಸಗೊಳಿಸಿದೆ ಎಂದರು.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಜಲಾಶಯಗಳು, ರೈಲು ನಿಲ್ದಾಣ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಜೊತೆಗೆ ರಾಜ್ಯಾದ್ಯಂತ ಇರುವ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡಲಾಗುತ್ತಿದೆ. ಮೈಸೂರಿನ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಎಷ್ಟು ಜನರಿದ್ದಾರೆ ಎನ್ನುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ನಮ್ಮ ದೇಶದ ಸೈನಿಕರ ಕ್ಷೇಮ ಮತ್ತು ಮುಂದೆ ನಡೆಯುವ ಯುದ್ಧದಲ್ಲಿ ಭಾರತೀಯ ಸೈನಿಕರಿಗೆ ಯಾವುದೇ ಪ್ರಾಣಾಪಾಯ ಆಗದೆ ಗೆಲುವು ಸಿಗಲಿ ಎಂದು ರಾಜ್ಯ ಸರ್ಕಾರದಿಂದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಸಂಕಲ್ಪದೊಂದಿಗೆ ಪೂಜೆ ನಡೆಸಲು ಆದೇಶ ಮಾಡಲಾಗಿದೆ ಎಂದರು.