ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಇಂದು ಶಾಲಾಗಳಿಗೆ ರಜೆ ಘೋಷಿಸಲಾಗಿದೆ.
ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಉತ್ತರ ಕನ್ನಡ ಜಿಲ್ಲೆಯ 8 ತಾಲೂಕು ಹಾಗೂ ಉಡುಪಿ ಜಿಲ್ಲಾದ್ಯಂತ ಶಾಲೆಗಳಿಗೆ, ಪಿಯುಸಿ, ಐಟಿಐ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 5 ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಇಂದು ರಜೆ ಘೋಷಿಸಿ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಜೂನ್ 19 ರವರೆಗೆ ಈ ಭಾಗಗಳಲ್ಲಿ ಗುಡುಗು, ಬಿರುಗಾಳಿ ಮಳೆ ಸುರಿಯುವ ಸಾಧ್ಯತೆ ಇದೆ .ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಜಯನಗರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು,ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಮೇಗಶಿರಾ ಮಳೆಯ ಅಬ್ಬರಕ್ಕೆ ಮತ್ತೆ ಮೂವರು ಬಲಿಯಾಗಿದ್ದಾರೆ. ಹಲವಡೆ ಭೂಕುಸಿತ ಉಂಟಾಗಿ ಜನರು ಪರದಾಟ ನಡೆಸುವಂತಾಗಿದೆ. ಶಿವಮೊಗ್ಗದಲ್ಲಿ ಭಾರೀ ಮಳೆಗೆ. ಆಡಗಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಸಿದ್ದಮ್ಮ (100) ಎಂಬ ವೃದ್ಧೆ ಮೃತಪಟ್ಟಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಎಲೆಕಲ್ಲು ಘಾಟಿ ಬಳಿ ಮರದ ಕೊಂಬೆ ಬಿದ್ದು, ಬೈಕ್ ಸವಾರ ಕಡಬಗೆರೆಯ ಅನಿಲ್ ರೋಜಾರಿಯೋ (50)ಮೃತಪಟ್ಟಿದ್ದಾರೆ.ಮಳೆಯಿಂದ ಮನೆ ಕುಸಿದು ಬಿದ್ದ ಪರಿಣಾಮ ಕಲಬುರಗಿ ಜಿಲ್ಲೆ ಜೇವರ್ಗಿ ಯಲ್ಲಿ 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.