ಬೆಳಗಾವಿ : ಬೆಳಗಾವಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ಗಳ ಮೇಲೆ ಆರೋಗ್ಯ ಅಧಿಕಾರಿಗಳು ಇಂದು ಏಕಾಏಕಿ ದಾಳಿ ಮಾಡಿದರು. ಮೇಕಪ್, ಟ್ರೆಡಿಂಗ್, ವ್ಯಾಕ್ಸಿಂಗ್ ಮಾಡಬೇಕಿದ್ದ ಇಲ್ಲಿನ ಪಾರ್ಲರ್ ಸಿಬ್ಬಂದಿ ಮಾಡುತ್ತಿದ್ದದ್ದೇ ಬೇರೆಯಾಗಿತ್ತು. ಕೂದಲಿನ ಕಸಿ, ಚರ್ಮರೋಗ ಚಿಕಿತ್ಸೆ, ಮುಖದ ಕಾಂತಿ ಹೆಚ್ಚಿಸಲು ಕೆಮಿಕಲ್, ಸಿರೈಡ್ ಸೇರಿದಂತೆ ಚರ್ಮದ ಮೇಲೆ ದುಷ್ಪರಿಣಾಮ ಬೀರುವಂತಹ ವಸ್ತುಗಳನ್ನು ಬಳಸುತ್ತಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಡಿಎಚ್‌ಒ ಡಾ. ಈಶ್ವರ ಗಡಾದಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು 30 ಪಾರ್ಲರ್‌ಗಳ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಸಾಕಷ್ಟು ಕೆಮಿಕಲ್ ವಸ್ತುಗಳು, ಸಿರೈಡ್‌ನಂತಹ ಔಷಧಿಗಳು ಪತ್ತೆಯಾದವು. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು 10 ಬ್ಯೂಟಿ ಪಾರ್ಲರ್ಗಳನ್ನು ಜಪ್ತಿ ಮಾಡಿದ್ದು, 20 ಬ್ಯೂಟಿ ಪಾರ್ಲರ್ಗಳಿಗೆ ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಸಾರ್ವಜನಿಕರು ಲಿಖಿತರೂಪದಲ್ಲಿ ದೂರು ನೀಡಿದ್ದರು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಸಿ ಮೊಹಮ್ಮದ್ ರೋಷನ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಅಲ್ಲದೆ, ಎಲ್ಲ ಪಾರ್ಲರ್‌ಗಳ ಮೇಲೆ ದಾಳಿ ನಡೆಸುವಂತೆ ಸೂಚಿಸಿದ್ದರು. ಈ ಹಿನ್ನೆಲೆ 30ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ ಗಳ ಮೇಲೆ ಆರೋಗ್ಯಧಿಕಾರಿಗಳು ದಾಳಿ ಮಾಡಿದ್ದಾರೆ.