ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಪ್ರಜ್ವಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದೆ.
ಇಂದು ಹೈಕೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಪ್ರಜ್ವಲ್ ಪರ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ತಮ್ಮ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪ ಸತ್ಯಕ್ಕೆ ದೂರವಾಗಿದೆ. ಘಟನೆ ನಡೆದಿದ್ದರೂ ನಾಲ್ಕು ವರ್ಷಗಳ ಬಳಿಕ ದೂರು ನೀಡಿದ್ದು ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ ಎಂದರು.
ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೆ ಸಂತ್ರಸ್ತೆ ಮಹಿಳೆ ಮೊದಲು ಅರ್ಜಿದಾರರ ತಂದೆ HD ರೇವಣ್ಣ ವಿರುದ್ಧ ಅತ್ಯಾಚಾರ ಆರೋಪದಲ್ಲಿ ದೂರು ದಾಖಲಿಸಿದ್ದರು. ಬಳಿಕ ಅರ್ಜಿದಾರರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ನಾಲ್ಕು ವರ್ಷಗಳ ಹಿಂದೆ 2020ರಲ್ಲಿ ನಡೆದಿರುವ ಘಟನೆ ಸಂಬಂಧಿಸಿದಂತೆ 2024ರಲ್ಲಿ ದೂರು ನೀಡಲಾಗಿದೆ. ಇಷ್ಟು ವಿಳಂಬ ಏಕೆ ಮಾಡಲಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಪೀಠ, ಘಟನೆ ನಡೆದೇ ಇಲ್ಲವೇ ಎಂದು ಪ್ರಶ್ನಿಸಿತು. ಈ ವೇಳೆ ವಕೀಲರು, ತಮ್ಮ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪ ಸತ್ಯಕ್ಕೆ ದೂರವಾಗಿದೆ. ಘಟನೆ ನಡೆದಿದ್ದರೂ ನಾಲ್ಕು ವರ್ಷಗಳ ಬಳಿಕ ದೂರು ನೀಡಿದ್ದು ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ ಎಂದು ವಾದಿಸಿದರು.