ಬೆಂಗಳೂರು : ಚುನಾವಣಾ ಬಾಂಡ್ ಹೆಸರಿನಲ್ಲಿ ಹಣ ಸುಲಿಗೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನವೀನ್ ಕುಮಾರ್ ಕಟೀಲು ಹಾಗೂ ಇತರರ ವಿರುದ್ಧ ಈ ಕುರಿತಂತೆ ಕೇಸ್ ದಾಖಲಾಗಿತ್ತು. ಇದೀಗ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠವು ಇಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.
ದೂರುದಾರ ಆದರ್ಶ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದು, ಇಡಿಯನ್ನು ಬಳಸಿಕೊಂಡು ಚುನಾವಣಾ ಹಣ ಸಂಗ್ರಹಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ವಿರುದ್ಧ ಈ ಒಂದು ಆರೋಪವಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ದೂರು ದಾಖಲಿಸಲಾಗಿದೆ. ಆಡಳಿತ ಪಕ್ಷ ಸಿಬಿಐ, ಇಡಿಯನ್ನು ಬಳಸಿ ಹಣ ಸುಲಿಗೆ ಮಾಡುತ್ತಿದೆ. ಪ್ರತಿ ನಾಗರಿಕನು ಇದರಿಂದ ನೊಂದಿರುವುದರಿಂದ ದೂರು ದಾಖಲಿಸಬಹುದು ಎಂದು ವಾದಿಸಿದರು.
ನವೀನ್ ಕುಮಾರ್ ಕಟೀಲು ಪರ ಹಿರಿಯ ವಕೀಲ ಕೆ ಜಿ ರಾಘವನ್ ವಾದ ಮಂಡಿಸಿದ್ದು, ಸುಲಿಗೆಗೆ ಒಳಗಾದಂತಹ ಸಂತ್ರಸ್ತರು ಯಾರು ದೂರು ನೀಡಿಲ್ಲ.ದೂರುದಾರರು ಸಂತ್ರಸ್ತರು ಅಲ್ಲದಿರುವುದರಿಂದ ದೂರು ದಾಖಲಿಸುವಂತಿಲ್ಲ. ಈ ಪ್ರಕರಣದಲ್ಲಿ ಸಂತ್ರಸ್ತ ರಲ್ಲದಿರುವುದರಿಂದ ದೂರು ದಾಖಲಿಸುವಂತಿಲ್ಲ. ಆರೋಪಿಗಳು ಹಣ ಸ್ವೀಕರಿಸಿದ ಬಗ್ಗೆಯೂ ದೂರಿನಲ್ಲಿ ಯಾವುದೇ ಚಕಾರಾವಿಲ್ಲ.
ಹೀಗಾಗಿ ಸುಲಿಗೆ ವ್ಯಾಖ್ಯಾನಕ್ಕೆ ದೂರು ಒಳಪಡುವುದಿಲ್ಲವೆಂದು ವಾದಿಸಿದರು.ಈ ವೇಳೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಸದ್ಯ ಪ್ರಕರಣದ ತನಿಖೆಗೆ ನೀಡಿದ ತಡೆಯಾಜ್ಞೆಯನ್ನು ಹೈಕೋರ್ಟ್ ಇದೀಗ ವಿಸ್ತರಿಸಿದೆ.
ದೂರಿನಲ್ಲೇನಿದೆ?
ಚುನಾವಣಾ ಬಾಂಡ್ ಮೂಲಕ ಇವರು ಸುಮಾರು 8000 ಕೋಟಿ ರೂ ಸುಲಿಗೆ ಮಾಡಿದ್ದಾರೆಂದು ಅರ್ಜಿದಾರ, ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ್ ಆಯ್ಯರ್ ಕೋರ್ಟಿಗೆ ದೂರು ನೀಡಿ ದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕೇಂದ್ರ ಸಚಿವ ರಾದ ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ, ದಿಲ್ಲಿಯ ಇಡಿ ಅಧಿಕಾರಿಗಳು, ಆಗಿನ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು, ಆಗಿನ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಭಾರತೀಯ ಜನತಾ ಪಾರ್ಟಿಯ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ವರದಿ ನೀಡುವಂತೆ ತಿಲಕನಗರ ಠಾಣೆ ಪೊಲೀಸರಿಗೆ ಕೋರ್ಟ್ ಆದೇಶಿಸಿತ್ತು.
ಎಪ್ರಿಲ್ 2019, ಆಗಸ್ಟ್ 2022 ಹಾಗೂ 2023ರ ನವೆಂಬರ್ ಅವಧಿಯಲ್ಲಿ ವೇದಾಂತ ಮತ್ತು ಸ್ಟರಲೈಟ್ ಕಂಪನಿಗೆ ಬೆದರಿಕೆ ಹಾಕಿ ಸುಮಾರು 230 ಕೋಟಿ ರೂ ಬಾಂಡ್ ಖರೀದಿ ಮಾಡುವಂತೆ ಮಾಡಿದ್ದಾರೆ. ಹಾಗೆಯೇ ಅರಬಿಂದೋ ಫಾರ್ಮ ಕಂಪೆನಿಗೆ ಇಡಿ ಮೂಲಕ ದಾಳಿ ನಡೆಸಿ 49.5 ಕೋಟಿ ರೂಗಳನ್ನು ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ದೂರಿದ್ದಾರೆ.ಈ ಕುರಿತು 2024ರ ಮಾರ್ಚ್‌ನಲ್ಲಿ ತಿಲಕನಗರ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಏಪ್ರಿಲ್ ತಿಂಗಳಲ್ಲಿ ಡಿಸಿಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ತಮ್ಮ ದೂರಿನಲ್ಲಿ ಅರ್ಜಿದಾರರು ಹೇಳಿದ್ದಾರೆ.