ಬೆಂಗಳೂರು : ರಾಮನಗರದ ಬಿಡದಿ ಬಳಿಯ ಕೇತಗಾನಹಳ್ಳಿ ಬಳಿ ಕೇಂದ್ರ ಸಚಿವ HD ಕುಮಾರಸ್ವಾಮಿ ವಿರುದ್ಧ 6 ಎಕರೆ ಒತ್ತುವರಿ ಸಂಬಂಧ ಸ್ಥಳೀಯ ತಹಸೀಲ್ದಾರ್ ನೀಡಿರುವ ನೋಟಿಸ್ ಪ್ರಶ್ನಿಸಿ ಎಚ್.ಡಿ. ಕುಮಾರಸ್ವಾಮಿ ಹೈ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಸಂಬಂಧ ಇಂದು ನ್ಯಾ.ಎನ್ ಎಸ್ ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಜಡ್ಜ್ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿ, ಅಲ್ಲಿವರೆಗೂ ಮಧ್ಯಂತರ ರಿಲೀಫ್ ವಿಸ್ತರಿಸಿ ಆದೇಶಿಸಿತು.
ಎಚ್ ಡಿ ಕುಮಾರಸ್ವಾಮಿ ಪರವಾಗಿ ಉದಯ ಹೊಳ್ಳ ಮತ್ತು ಎಂ.ವಿ ನಿಶಾಂತ್ ವಾದ ಮಂಡಿಸಿದರು. 1986 ರಲ್ಲಿ ಖರೀದಿಸಿದ ಜಮೀನನ್ನು ಈಗ ಒತ್ತುವರಿ ಎನ್ನುತ್ತಿದ್ದಾರೆ. ಭೂ ಕಂದಾಯ ಕಾಯ್ದೆಯ ತಿದ್ದುಪಡಿ ಪ್ರಶ್ನಿಸುತ್ತೇವೆ ಎಂದು ವಾದಿಸಿದರು. ಈ ವೇಳೆ ನ್ಯಾಯಧೀಶರು ಅರ್ಜಿ ವಿಚಾರಣೆ ಏಪ್ರಿಲ್ 8ಕ್ಕೆ ಹೈಕೋರ್ಟ್ ಮುಂದೂಡಿತು. ಅಲ್ಲಿಯವರೆಗೂ ಮಧ್ಯಂತರ ರಿಲೀಫ್ ವಿಸ್ತರಿಸಿ ಹೈ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ?
ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ಡಿ.ಸಿ.ತಮ್ಮಣ್ಣ ಮತ್ತಿತರರು 2014ರಲ್ಲಿ ರಾಮನಗರದ ಬಿಡಿದಿ ಬಳಿಯ ಕೇತಗಾನಹಳ್ಳಿಯಲ್ಲಿ ವಿವಿಧ ಎಂಟು ಸರ್ವೆ ನಂಬರ್ಗಳ ಒಟ್ಟು 14 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆಂಬ ಆರೋಪವಿದೆ. ಈ ಸಂಬಂಧ ಲೋಕಾಯುಕ್ತ ನೀಡಿದ್ದ ವರದಿ ಜಾರಿಗೊಳಿಸಲು ಹೈಕೋರ್ಟ್ ಆದೇಶ ನೀಡಿದ್ದರೂ ಅದನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.
ಈ ಅರ್ಜಿ ಪರಿಶೀಲಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಆನಂತರ ಜಮೀನಿನ ಸರ್ವೆ ಕಾರ್ಯ ನಡೆಸಿದ ಸ್ಥಳೀಯ ತಹಸೀಲ್ದಾರ್, ಎಚ್‌ಡಿಕೆ ಮತ್ತಿತರರಿಗೆ ಕಾನೂನಿನ್ವಯ ನೋಟಿಸ್ ಜಾರಿಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಎಚ್‌ಡಿಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ಇದೀಗ ಹೈಕೋರ್ಟ್ ವಿಚಾರಣೆ ನಡೆಸಿ ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿತು.