ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೈಕೋರ್ಟ್ ನಲ್ಲಿ A1 ಆರೋಪಿ ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ, ಎಲ್ಲಾ ಆರೋಪಿಗಳ ಅರೆಸ್ಟ್ ಮೆಮೋದ ಕಾಪಿ ನೀಡಲು ಆರೋಪಿಗಳ ಪರ ವಕೀಲರಿಗೆ ಜಡ್ಜ್ ವಿಶ್ವಜೀತ್ ಶೆಟ್ಟಿ ಸೂಚನೆ ನೀಡಿದರು.ಬಳಿಕ ವಿಚಾರಣೆಯನ್ನು ಡಿಸೆಂಬರ್ 6 ರಂದು ಮುಂದೂಡಿ ಆದೇಶ ಹೊರಡಿಸಿದರು.ಇದೆ ವೇಳೆ ನಟ ದರ್ಶನ್ ಅವರ ಜಾಮೀನು ಅರ್ಜಿ ಕೂಡ ಡಿಸೆಂಬರ್ 6 ರಂದು ಮುಂದೂಡಿ ಆದೇಶಿಸಿದರು.
ವಿಚಾರಣೆ ಆರಂಭವಾದ ಬಳಿಕ ಹೈಕೋರ್ಟ್ ಜಡ್ಜ್ ಎಸ್.ವಿಶ್ವಜೀತ್ ಶೆಟ್ಟಿ ಅವರು, ಪವಿತ್ರ ಗೌಡ ಅವರ ಪರ ವಕೀಲ ಟಾಮಿ ಸೆನಾಸ್ಟಿಯನ್ ಅವರಿಗೆ ಎಷ್ಟು ಹೊತ್ತು ವಾದ ಮಂಡಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು ಅರ್ಧ ಗಂಟೆಗಳ ಕಾಲ ವಾದ ಮಂಡಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಪವಿತ್ರಾಗೌಡ ಹಾಗೂ ನಟ ದರ್ಶನ್ ಲೀವ್ ಇನ್ ರಿಲೇಷನ್ಶಿಪ್ ನಲ್ಲಿ ಇದ್ದರು. ಪ್ರಕರಣದ A3 ಆರೋಪಿ ಪವಿತ್ರ ಗೌಡ ಬಳಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ ತಿಂಗಳಲ್ಲಿ ರೇಣುಕಸ್ವಾಮಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ. ಏಪ್ರಿಲ್ ತಿಂಗಳಲ್ಲಿ ರೇಣುಕಾ ಸ್ವಾಮಿ ನಂಬರ್ ಅನ್ನು ಪವಿತ್ರ ಗೌಡ ಪಡೆದಿದ್ದಾಳೆ. ಜೂನ್ ತಿಂಗಳಲ್ಲಿ ಪವಿತ್ರ ಹೆಸರಿನಲ್ಲಿ ಪವನ್ ಆತನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಸೆಬಾಸ್ಟಿಯನ್ ವಾದ ಮಂಡಿಸಿದರು.
ಜೂನ್ 8ರಂದು ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದರು. ನಂತರ ಪವನ್ ಈ ಮಾಹಿತಿಯನ್ನು ನಟ ದರ್ಶನ್ ಗೆ ಹೇಳಿದ. ದರ್ಶನ್ ಪವಿತ್ರ ಗೌಡಳನ್ನು ಶೆಡ್ಗೆ ಕರೆ ತಂದರು. ಮೊದಲು ನಟ ದರ್ಶನ್ ರೇಣುಕಾ ಸ್ವಾಮಿಗೆ ಹೊಡೆದ ಆರೋಪವಿದೆ. ನಂತರ ಪವಿತ್ರ ಗೌಡ ರೇಣುಕಾ ಸ್ವಾಮಿ ಕಪಾಳಕ್ಕೆ ಹೊಡೆದಿದ್ದಾಳೆ. ಬಳಿಕ ಪವಿತ್ರ ಗೌಡರನ್ನು ಮನೆಗೆ ಬಿಟ್ಟು ಬಂದರೆಂದು ಹೇಳಿಕೆ ಇದೆ. ಆರೋಪ ಪಟ್ಟಿಯಲ್ಲಿ ಇವೆಲ್ಲವನ್ನೂ ಉಲ್ಲೇಖಿಸಲಾಗಿದೆ.
ಕೇವಲ ಒಂದು ಬಾರಿ ಮಾತ್ರ ಪವಿತ್ರಾ ಗೌಡ ಹೊಡೆದಿದ್ದಾಳೆ. ನಂತರ ಮನೆಗೆ ಬಿಡಲಾಯಿತೆಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. A3 ಪವನ್ ಪವಿತ್ರಾಗೌಡ ಹಾಗೂ ನಟ ದರ್ಶನ್ ಅವರ ಬಳಿ ಕೆಲಸಕ್ಕೆ ಇದ್ದ. ಬಲವಂತವಾಗಿ ಅಪಹರಣ ಮಾಡಿದ ಬಗ್ಗೆ ಯಾವುದೇ ಸಾಕ್ಷಿಗಳು ಇಲ್ಲ. A2 ದರ್ಶನ್ ಜೊತೆ ಬಂದು ಪವಿತ್ರ ಗೌಡ ರೇಣುಕಾ ಸ್ವಾಮಿ ಕಪಾಳಕ್ಕೆ ಹೊಡೆದಿದ್ದಾಳೆ. ಪವಿತ್ರ ಗೌಡ ಚಪ್ಪಲಿ ಪಡೆದು ದರ್ಶನ್ ಹಲ್ಲೆ ಮಾಡಿದ್ದಾರೆ. ಇಷ್ಟು ಮಾತ್ರ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಇದೆ.
ಪ್ರಕರಣದಲ್ಲಿ ಇಬ್ಬರು ಪುನೀತ್ ಎಂಬ ಸಾಕ್ಷಿಗಳಿದ್ದಾರೆ. ಒಬ್ಬ ಪುನೀತ್ ಪ್ರತ್ಯಕ್ಷ ಸಾಕ್ಷಿ. ಮತ್ತೊಬ್ಬ ಪೂರಕ ಸಾಕ್ಷಿ. ಅಶ್ಲೀಲ ಮೆಸೇಜ್ ನೋಡಿ ಆಕೆಗೆ ಆಘಾತವಾಯಿತು. ತನ್ನ ನೋವನ್ನು ಆಕೆ ಆರೋಪಿ A3, ಪವನ್ ಬಳಿ ತೋಡಿಕೊಂಡಿದ್ದಾಳೆ. ಪವಿತ್ರ ಗೌಡ ಮಹಿಳೆಯಾಗಿದ್ದು, ಅಪರಾಧದ ಹಿನ್ನೆಲೆಯಿಲ್ಲ. ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಿದ ಉದಾಹರಣೆಗಳಿವೆ. ಪತಿಯನ್ನೇ ಕೊಂದ ಪತ್ನಿಗೂ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿದೆ. ಪವಿತ್ರ ಗೌಡಗೆ 9ನೇ ತರಗತಿ ಓದುತ್ತಿರುವ ಮಗಳು ಇದ್ದಾಳೆ ಹೀಗಾಗಿ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಿದರು.